ನವದೆಹಲಿ: ದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕಿನ ಎರಡನೇ ಅಲೆಯ ಭೀತಿ ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಚರ್ಚೆ ನಡೆಸಲು ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾರ್ಚ್ 17ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಮಾ.17ರ ಮಧ್ಯಾಹ್ನ 12:30ಕ್ಕೆ ಸಭೆ ಆರಂಭವಾಗಲಿದೆ. ಈ ಹಿಂದೆಯೂ ಲಾಕ್ಡೌನ್ ಹಾಗೂ ಕೊರೊನಾ ಸಂಕಷ್ಟ ಹೆಚ್ಚಾದ ಸಮಯದಲ್ಲಿ ಮೋದಿ ಇಂತಹ ಸಭೆಗಳನ್ನು ನಡೆಸಿದ್ದರು. ಕಳೆದ ಜನವರಿಯಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭ ಮಾಡುವ ಮುನ್ನ ಕೊನೆಯ ಬಾರಿಗೆ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು.
ಆರೋಗ್ಯ ಸಚಿವಾಲಯದ ಮಾಹಿತಿಯಂತೆ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದೇಶದ 8 ಪ್ರಮುಖ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿದೆ. ಜನರು ಸೋಂಕಿನ ಕುರಿತು ನಿರ್ಲಕ್ಷ್ಯ ವಹಿಸಿದರೆ ಸೋಂಕಿನ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಸಿಂಗ್ ಎಚ್ಚರಿಕೆ ನೀಡಿದ್ದರು.