ಮಂಗಳೂರು: ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನೆ ಸಂಸ್ಥೆ(ನೀರಿ) ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲು ಬದ್ಧ ಎಂದು ಸರಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳನ್ನು ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ. ಪಚ್ಚನಾಡಿ, ಕುಡುಪು, ಮಂದಾರ ಪ್ರದೇಶದಲ್ಲಿನ ಘನತ್ಯಾಜ್ಯ ಭೂಭರ್ತಿಯಿಂದ ಉಂಟಾದ ಅವಘಡದ ವಿಚಾರವಾಗಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯನ್ಯಾಯಮೂರ್ತಿ ಎಎಸ್ ಓಕ್ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಹಾಜರಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುವ ಕಟ್ಟಡ ಹಾಗೂ ಇತರ ನಿರ್ಮಾಣ ಕಾಮಗಾರಿಗಳಲ್ಲಿ ನೀರಿ ಸಂಸ್ಥೆ ಸೂಚಿಸಿದ ಮಾರ್ಗಸೂಚಿ ಪಾಲಿಸಲು ಬದ್ಧ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಜತೆಗೆ ಈ ಕುರಿತ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮುಚ್ಚಳಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಮುಚ್ಚಳಿಕೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಭರವಸೆ ನೀಡಿರುವುದರಿಂದ ಕಾಮಗಾರಿಗಳನ್ನು ಮುಂದುವರಿಸಲು ಅನುಮತಿ ನೀಡುತ್ತಿರುವುದಾಗಿ ಹೈಕೋರ್ಟ್ ಹೇಳಿದೆ. ಮುಂದಿನ ವಿಚಾರಣೆ ಮಾ.30 ರಂದು ನಡೆಯಲಿದೆ.