ಮೈಸೂರು: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಬೀದಿಯಲ್ಲಿ ಕಗ್ಗೊಲೆಯಾಗಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೂ ಈ ರೀತಿ ಕೊಲೆ ಆಗಿರೋದು ನನಗೆ ನಾಚಿಕೆ ತರುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಪ್ರತಿ ಹತ್ಯೆ ಆದಾಗಲೂ ಸಿದ್ದರಾಮಯ್ಯ ರನ್ನು ಬೈಯುತ್ತಿದ್ದೆವು. ಇವತ್ತು ನಮ್ಮದೇ ಸರ್ಕಾರ ಇದೆ. ನಮ್ಮ ಕಾರ್ಯಕರ್ತ ಒಬ್ಬ ಹತ್ಯೆ ಆಗಿದ್ದಾನೆ. ಇದು ನನಗೆ ಅತೀವ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಬೀದಿಯಲ್ಲಿ ಕಗ್ಗೊಲೆಯಾಗಿದ್ದಾರೆ. ಇದು ನನಗೆ ಅತೀವ ನೋವು ತಂದಿದೆ. ಈ ಕುರಿತು ಸಿಎಂ ಬೊಮ್ಮಾಯಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆಂದು ಪತ್ರಿಕಾ ಹೇಳಿಕೆ ಕೊಟ್ಟರೆ ಪ್ರಯೋಜನ ಇಲ್ಲ, ಅವರು ಮಾತು ನಿಲ್ಲಿಸಿ ಕೆಲಸದಲ್ಲಿ ಕಠಿಣತೆಯನ್ನು ತೋರಿಸಲಿ ಎಂದು ಹೇಳಿದರು.
ಇನ್ನು ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ನಡೆಯಿತು, ಈಗ ಅವರೇ ಸಿಎಂ ಆಗಿದ್ದಾರೆ, ಅಂದೆ ಎಸ್‌ಡಿಪಿಐ, ಪಿಎಫ್‌ಐ ಮೇಲೆ ಕ್ರಮ ತಗೊಂಡಿದ್ದರೆ ಈ ಕೊಲೆ ಆಗುತ್ತಿರಲಿಲ್ಲ ಎಂದು ಹೇಳಿದರು.
ಇನ್ನು ಹಿಜಾಬ್ ವಿಚಾರಕ್ಕೆ ಬಂದರೆ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಯಾರು ಪಾಲನೆ ಮಾಡುತ್ತಿಲ್ಲ ಇದರಿಂದ ರಾಜ್ಯದಲ್ಲಿ ಆಶಾಂತಿ ಸೃಷ್ಟಿಯಾಗಿದೆ, ಆದರೆ 144 ಸೆಕ್ಷನ್ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಕೊಂಡಿಲ್ಲ. ಈಗ ನಮ್ಮ ಕಾರ್ಯಕರ್ತನ ಹತ್ಯೆಯಾಗಿದೆ ಇನ್ನು ಯಾವಾಗ ಸರ್ಕಾರ ಕ್ರಮ ಕೈಗೊಳ್ಳುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

























