ಮಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಪಿಲಾ ಗೋಶಾಲೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತವೆ ಎಂದು ವಿಎಚ್‌ಪಿಯ ಶರಣ್ ಪಂಪ್‌ವೆಲ್ ಅವರು ತಿಳಿಸಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಷ್ಟ್ರೀಯ ಮತ್ತು ಕರಾವಳಿಯ ಭದ್ರತೆಯನ್ನು ಪರಿಗಣಿಸಿ ಕರಾವಳಿ ಕಾವಲು ತರಬೇತಿ ಕೇಂದ್ರ ನಿರ್ಮಾಣಕ್ಕೆ ವಿಎಚ್‌ಪಿ ಮತ್ತು ಬಜರಂಗದಳ ಬೆಂಬಲಿಸುತ್ತದೆ. ಹಾಗೆಯೇ ಕಪಿಲಾ ಗೋ ಶಾಲೆ ನಿರ್ಮಾಣಕ್ಕೆ ಪ್ರತ್ಯೇಕ ಭೂಮಿಯನ್ನು ಒದಗಿಸುವಂತೆಯೂ ನಾವು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಕಪಿಲಾ ಗೋ ಶಾಲೆಗೆ ನಾವು ಸಂಪೂರ್ಣ ಸಹಕಾರ, ಬೆಂಬಲವನ್ನು ನೀಡಲಿದ್ದೇವೆ. ಜೊತೆಗೆ ಆ ಗೋಶಾಲೆಯ ಹಸುಗಳಿಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಬೇಕಾದ ಅಗತ್ಯ ನೆರವು ನೀಡುವುದಕ್ಕೂ ನಾವು ಬದ್ಧರಿದ್ದೇವೆ. ಆರು ತಿಂಗಳ ಹಿಂದೆಯೇ ಈ ಭೂಮಿಯನ್ನು ಕರಾವಳಿ ಕಾವಲು ತರಬೇತಿ ಕೇಂದ್ರ ಸ್ಥಾಪನೆಯ ಹಿನ್ನೆಲೆಯಲ್ಲಿ ತೆರವು ಮಾಡುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು. ಅವರು ಸರ್ಕಾರದ ಈ ಸೂಚನೆಯನ್ನು ನಿರ್ಲಕ್ಷಿಸಿದ್ದರು. ಆದ್ದರಿಂದ ಚರ್ಚೆಯ ಅಗತ್ಯವಿಲ್ಲ ಎಂದು ಶರಣ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಹಿನ್ನಲೆಯಲ್ಲಿ ನಡೆದ ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ಮಾತನಾಡಿರುವ ಅವರು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡನ್ನು ಒಳಗೊಂಡು ಮಂಗಳೂರಿನಲ್ಲಿ ಸುಮಾರು 20 ಕೋಟಿ ರೂ. ಗಳು ಮಂದಿರ ನಿರ್ಮಾಣ ನಿಧಿಗೆ ಸಮರ್ಪಣೆಯಾಗಿದೆ. ಕರ್ನಾಟಕದಿಂದ ಸುಮಾರು 250 ಕೋಟಿ ರೂ. ಗಳಷ್ಟು ನಿಧಿ ಸಮರ್ಪಣೆಯಾಗಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಇತ್ತೀಚೆಗೆ ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಕಿಡಿಗೇಡಿಗಳ ಕುಕೃತ್ಯದ ವಿರುದ್ಧ ಮಾರ್ಚ್ 21 ರಂದು ನಗರದ ಕದ್ರಿ ದೇವಸ್ಥಾನದಿಂದ ಕೊರಗಜ್ಜನ ಮೂಲಸ್ಥಾನ ಕುತ್ತಾರ್‌ಪದವಿಗೆ ʼಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆʼ ಮೂಲಕ ವಿಎಚ್‌ಪಿ ಮತ್ತು ಬಜರಂಗದಳ ಪಾದಯಾತ್ರೆ ನಡೆಸಲಿವೆ ಎಂದು ಶರಣ್ ಪಂಪ್‌ವೆಲ್ ಹೇಳಿದ್ದಾರೆ.