ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಗೆ ಕಳೆದ ಕೆಲ ಸಮಯಗಳಿಂದ ಖಾಯಂ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯ ಕೊರತೆ ಉದ್ಭವಿಸಿದ ಹಿನ್ನೆಲೆ ಖಾಯಂ ಪಿ.ಡಿ.ಒ ಹಾಗೂ ಖಾಯಂ ಕಾರ್ಯದರ್ಶಿ ನೇಮಕ ಮಾಡುವಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ಸುಮಾರು ಹದಿನಾಲ್ಕು ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಹಾಗೂ ಸುಮಾರು 22 ಮಂದಿ ಸದಸ್ಯರಿರುವ ಬೃಹತ್ ಗ್ರಾಮ ಪಂಚಾಯತ್ ಇದಾಗಿದ್ದು ಇಲ್ಲಿನ ಸಮಸ್ಯೆ ಹೇಳತೀರದಾಗಿರುವುದು ಮಾತ್ರ ಬೇಸರದ ಸಂಗತಿ. ಈ ಮೊದಲು ಇದ್ದ ಒಬ್ಬ ಕಾರ್ಯದರ್ಶಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ಆದೇಶಿಸಿರುವ ಇಲಾಖೆ ಆ ಬಳಿಕ ಇಲ್ಲಿಗೆ ಖಾಯಂ ಆಗಿ ಯಾರನ್ನೂ ನೇಮಿಸಿಲ್ಲದಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ಸದ್ಯ ಇಲ್ಲಿನ ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು ಅಭಿವೃದ್ಧಿ ಅಧಿಕಾರಿಯ ಕೊರತೆ ಎದ್ದು ಕಾಣುತ್ತಿದೆ.
ಈ ಬಗ್ಗೆ ಬೇಸತ್ತ ಗ್ರಾಮಸ್ಥರು ಹಾಗೂ ಪಂಚಾಯತ್ ಸದಸ್ಯರಾದ ಚಂದ್ರಹಾಸ ಈಶ್ವರ ಮಂಗಲ,ಪ್ರದೀಪ್ ರೈ ಎಂಬವರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಿದ್ದು, ಖಾಯಂ ಅಧಿಕಾರಿಗಳಿಬ್ಬರನ್ನು ನೇಮಿಸಲು ಮನವಿ ಸಲ್ಲಿಸಲಾಗಿದೆ.
ಬೇಡಿಕೆ ಈಡೇರದೆ ಅಧಿಕಾರಿಗಳನ್ನು ನೇಮಿಸದೆ ಇದ್ದಲ್ಲಿ ಮಾರ್ಚ್ 10 ರಂದು ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.


























