ಬೆಳ್ತಂಗಡಿ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾರಣ ಆಕೆ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಕುವೆಟ್ಟು ಗ್ರಾಮದ ಸಬರಬೈಲಿನ ನಿವಾಸಿ ರಾಜೇಶ್ ಎನ್ನಲಾಗಿದೆ.
ಬಾಲಕಿಯು ಕಳೆದ ವರ್ಷ ತನ್ನ ತಂದೆಯ ಅಕ್ಕನ ಮನೆಯಾದ ಸಬರಬೈಲು ಎಂಬಲ್ಲಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ರಾತ್ರಿ ರಾಜೇಶ್ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇನ್ನೊಂದು ಬಾರಿ ಆರೋಪಿಯ ಮನೆಗೆ ಹೋಗಿದ್ದ ವೇಳೆಯೂ ಇದೇ ರೀತಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.
ಇತ್ತೀಚೆಗೆ ಸಂತ್ರಸ್ತೆ ತನ್ನ ಮನೆಯಲ್ಲಿ ನಿತ್ರಾಣಗೊಂಡು ಮಲಗಿದ್ದಾಗ ಆಕೆಯ ಹೊಟ್ಟೆಯ ಗಾತ್ರದಲ್ಲಾದ ವ್ಯತ್ಯಾಸವನ್ನು ಗಮನಿಸಿ ಹೆತ್ತವರು ವಿಚಾರಿಸಿದಾಗ ಆಕೆ ನಿಜಾಂಶವನ್ನು ತಿಳಿಸಿದ್ದು, ಬಳಿಕ ಪೋಷಕರು ಬೆಳ್ತಂಗಡಿ ಠಾಣೆಗೆ ಬಂದು ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪೊಲೀಸರು ಆರೋಪಿ ರಾಜೇಶನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

























