ಪುತ್ತೂರು: ಕ್ಯಾಂಪ್ಕೊಗೆ ವಿದೇಶದಿಂದ ಕೊಕೊ ಬೀನ್ಸ್ ಕಳುಹಿಸುವ ಸಂದರ್ಭ ಸುಮಾರು 10 ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
2018-19 ರಲ್ಲಿ ಕ್ಯಾಂಪ್ಕೊ ಥೈಲ್ಯಾಂಡ್ನಿಂದ ಸುಂಕ ರಹಿತವಾಗಿ ಕೋಕೋ ಡ್ರೈ ಬೀನ್ಸ್ ಆಸಿಯನ್ ಎಫ್‌ಟಿಎ ಮೂಲಕ ದುಬೈಯ ಕೋಸ್ಪ್ಯಾಕ್ ಜನರಲ್ ಟ್ರೆಂಡಿಂಗ್ ಕಂಪನಿ ಆಮದು ಮಾಡಿತ್ತು.
ಖರೀದಿ ಆರ್ಡರ್ ಪ್ರಕಾರ ಕೋಸ್ ಪ್ಯಾಕ್ ಸಂಸ್ಥೆಯು ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಿ ಕೋಕೋ ಬೀನ್ಸ್ ಅನ್ನು ಪುತ್ತೂರಿನ ಕ್ಯಾಂಪ್ಕೋ ವೇರ್‌ಹೌಸ್‌ಗೆ ಕಳುಹಿಸಿತ್ತು. ಆದರೆ 2019 ರ ನವೆಂಬರ್‌ನಲ್ಲಿ ಡಿಆರ್‌ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ಕ್ಯಾಂಪ್ಕೊ ಗೋದಾಮಿಗೆ ದಾಳಿ ನಡೆಸಿ ಇದು ಥೈಲ್ಯಾಂಡ್ ಕೋಕೋ ಬೀನ್ ಅಲ್ಲ, ಇದನ್ನು ಆಫ್ರಿಕನ್ ರಾಷ್ಟ್ರಗಳಿಂದ ಆಮದು ಮಾಡಲಾಗಿದೆ ಎಂದು ಹೇಳಿ ಜಫ್ತಿ ಮಾಡಿದ್ದರು.
ಈ ಸಂದರ್ಭ ಕ್ಯಾಂಪ್ಕೊ 10.07 ಕೋಟಿ ರೂ ಮೊತ್ತವನ್ನು ಸುಂಕ, ಉಳಿಕೆ ತೆರಿಗೆ, ಬಡ್ಡಿ ಮತ್ತು ದಂಡದ ರೂಪದಲ್ಲಿ ಪಾವತಿ ಮಾಡಿ ಕೋಕೋ ಬೀನ್ಸ್ ಬಿಡುಗಡೆ ಮಾಡಿಸಿತ್ತು. ನಂತರ 2020ರ ಜೂನ್ 20ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕೋಸ್‌ಪ್ಯಾಕ್‌ನ ಮಾಲೀಕ ವಿನ್ಸಿ ಪಿಂಟೊ ಮತ್ತು ನಿರ್ದೇಶಕ ಜೀವನ್ ಲೋಬೋ ವಿರುದ್ಧ ಕ್ಯಾಂಪ್ಕೊ ದೂರು ದಾಖಲಿಸಿತ್ತು.
ಸೋಮವಾರ ವಿದೇಶದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿನ್ಸಿ ಪಿಂಟೊನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಪುತ್ತೂರು ಪೊಲೀಸರು ಕರೆತರುತ್ತಿದ್ದಾರೆ ಎಂದು ತಿಳಿದು ಬಂದಿದೆ.