ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿನ ಮಧ್ಯೆಯೂ ಮತ್ತೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ.18 ರಂದು ನಡೆದಿದೆ.
ಇಂದು ಪಿಯು ಪೂರ್ವ ಸಿದ್ದತಾ ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಆಗಮಿಸಿದ್ದು, ಈ ವೇಳೆ ಕಾಲೇಜು ಆಡಳಿತ ಮಂಡಳಿ ತರಗತಿ ಪ್ರವೇಶ ನಿರಾಕರಿಸಿದೆ. ಇದರಿಂದ ಆಕ್ರೋಶಗೊಂಡ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅಡಚಣೆಯಾಗುವ ರೀತಿ ಕಾಲೇಜು ಬಳಿ ಜಮಾವಣೆಯಾದಾಗ ಸ್ಥಳಕ್ಕೆ ಬಂದ ಮುಸ್ಲಿಂ ಸಮುದಾಯದ ನಾಯಕರ ಮೂಲಕ ವಿದ್ಯಾರ್ಥಿಗಳ ಮನವೊಲಿಕೆ ನಡೆಸಿದ್ದಾರೆ. ನಂತರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ನಿಂದ ಹೊರಕಳುಹಿಸಿದೆ. ಕೊನೆಗೂ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ವಾಪಾಸ್ ತೆರಳಿದ್ದಾರೆ ಎಂದು ತಿಳಿದು ಬಂದಿದೆ.