ಮಂಗಳೂರು: ‘ಶಾಲೆಗಳಲ್ಲಿ ಮಕ್ಕಳಿಗೆ ಭಗವದ್ಗೀತೆ ಶಿಕ್ಷಣ ನೀಡುವುದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ಅವರು ಯಾವುದನ್ನೂ ಬೇಕಾದರೂ ಹೇಳಿಕೊಡಲಿ. ಆದರೆ ನೈತಿಕ ಶಿಕ್ಷಣ ಬೇಕು. ಮುಖ್ಯವಾಗಿ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಸರಕಾರ ಮುಂದಾಗಲಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಮಂಗಳೂರು ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ರಾಜ್ಯ ಸರಕಾರವು ಮಕ್ಕಳಿಗೆ ಭಗವದ್ಗೀತೆಯನ್ನು ನೈತಿಕ ಶಿಕ್ಷಣವನ್ನಾಗಿ ಮಾಡಲು ಮುಂದಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ‘ಭಗವದ್ಗೀತೆ, ಕುರಾನ್, ಬೈಬಲ್ ಏನನ್ನು ಬೇಕಾದರೂ ಬೋಧನೆ ಮಾಡಲಿ. ಗುಣಮಟ್ಟದ ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡುವುದು ತಪ್ಪು.
ಮಾರುಕಟ್ಟೆಗೆ ಅನುಗುಣವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಸರಕಾರ ಈ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ ಮನೆಯಲ್ಲಿ ಮಕ್ಕಳಿಗೆ ಭಗವದ್ಗೀತೆ ಹೇಳಿ ಕೊಡ್ತಾರಲ್ವಾ..? ನೈತಿಕ ಶಿಕ್ಷಣ ಬೇಕು. ಹಾಗಂತ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ನಾನು ಬೈಬಲ್‌ಗೆ, ಕುರಾನ್‌ಗೆ ಯಾವುದಕ್ಕೂ ವಿರೋಧಿ ಅಲ್ಲ ಎಂದರು.
ಕರಾವಳಿಯಲ್ಲಿ ಜಾತ್ರೆ ಹಾಗೂ ಇನ್ನಿತರ ಸಮಾರಂಭದಲ್ಲಿ ಅನ್ಯಧರ್ಮೀಯರಿಗೆ ವಹಿವಾಟು ನಡೆಸಲು ಅನುಮತಿ ನೀಡಬಾರದೆಂದು ನಡೆಸಲಾಗುತ್ತಿರುವ ಅಭಿಯಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು ‘ನಾವೆಲ್ಲರೂ ಒಟ್ಟಿಗೆ ಸಹಬಾಳ್ವೆಯಿಂದ ಇರಬೇಕು. ಯಾವ ಧರ್ಮದವರೂ ಕೂಡ ಕೋಮುವಾದ ಮಾಡಬಾರದು. ಎಲ್ಲಾ ಧರ್ಮದವರನ್ನು ಗೌರವದಿಂದ ಕಾಣುವ ಕೆಲಸ ಮಾಡಬೇಕು. ನಾವು ಸಹಿಷ್ಣುತೆ, ಸಹಬಾಳ್ವೆಯಲ್ಲಿ ನಾವು ನಂಬಿಕೆ ಇಟ್ಟವರು’ ಎಂದು ಹೇಳಿದರು.
‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಶ್ಮೀರದಲ್ಲಿ ಏನಾಗಿದೆ, ಆ ಕಾಲದಲ್ಲಿ ಯಾವ ಸರ್ಕಾರ ಇತ್ತು, ಎನ್ನುವ ಸತ್ಯವನ್ನು ಜನರಿಗೆ ತೋರಿಸಿ. ಸಿನೆಮಾ ಏನು ತೋರಿಸಿದೆ ಮುಖ್ಯ ಅಲ್ಲ. ನಾನು ಸಿನೆಮಾ ನೋಡಲ್ಲ. ಅದನ್ನು ನೋಡ್ಲೇ ಬೇಕೂ ಅಂತಾ ಏನಿದೆ. ಇಲ್ಲವಲ್ಲಾ ಎಂದರು. ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಹಿಂದುತ್ವದ ವಿಚಾರದಲ್ಲಿ ಮೃದು ಧೋರಣೆ ತಳೆದಿದೆಯೇ ಎನ್ನುವ ವಿಚಾರದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕಾಂಗ್ರೆಸ್ ಸಾಫ್ಟ್ ಹಿಂದುತ್ವವೂ ಅಲ್ಲಾ , ಹಾರ್ಡ್ ಹಿಂದುತ್ವವೂ ಅಲ್ಲ. ಹಿಂದೂ ಧರ್ಮಕ್ಕೆ ನಾವು ಗೌರವ ಕೊಡುತ್ತೇವೆ. ಎಲ್ಲಾ ಧರ್ಮಗಳನ್ನೂ ಸಮಾನ ಭಾವದಿಂದ ನೊಡುತ್ತೇವೆ’ ಎಂದು ಹೇಳಿದರು.


























