ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಚೇರಿಯ ಬಾಗಿಲು ಮುರಿದು ಒಳನುಗ್ಗಿ ಲ್ಯಾಪ್ ಟಾಪ್ ಕಳವುಗೈದ ಘಟನೆ ಕಬಕದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತನನ್ನು ಮಂಜನಾಡಿಯ ಬದ್ರಿಯಾನಗರ ಕಲ್ಕಟ್ಟ ನಿವಾಸಿ ಅಬ್ದುಲ್ ಫಯಾನ್(22) ಎನ್ನಲಾಗಿದೆ.
ಅಬ್ದುಲ್ ಫಯಾನ್ ಮತ್ತು ಆತನ ಸ್ನೇಹಿತ ಸುಹೇಬ್ ಸೇರಿಕೊಂಡ ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಚೇರಿಯ ಬಾಗಿಲು ಮುರಿದು ಒಳನುಗ್ಗಿ ಲ್ಯಾಪ್ ಟಾಪ್ ಕಳವುಗೈದಿದ್ದು, ನಂತರ ಅದನ್ನು ಮಂಗಳೂರಿನ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಸದ್ರಿ ಆರೋಪಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾಂ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಹಿನ್ನೆಲೆ ಬಾಡಿ ವಾರೆಂಟ್ ಮುಖೇನ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಲಯದ ಬೆಳಗಾಂ ಜಿಲ್ಲಾ ಕಾರಗೃಹದಿಂದ ಆರೋಪಿಯನ್ನು ವಶಕ್ಕೆ ಪಡೆದು 5 ದಿನಗಳ ಕಾಲ ತನಿಖೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಆದೇಶ ನೀಡಿದ್ದು, ಆದೇಶದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ಹೇಳಿಕೆಯಂತೆ ಲ್ಯಾಪ್ ಟಾಪ್ ಮಾರಾಟ ಮಾಡಿದ ಅಂಗಡಿ ಮಾಲೀಕನಿಂದ ಲ್ಯಾಪ್ ಟಾಪ್ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಕ್ರ.10/2020 ಕಲಂ 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.