ಬೆಂಗಳೂರು: ಶಾಲೆ ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವುದು ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ತೀರ್ಪು ಪ್ರಕಟಿಸಿದ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ ತಮಿಳುನಾಡಿನ ಮುಸ್ಲಿಂ ಸಂಘಟನೆಯ ಮುಖಂಡನ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ.
ಜೊತೆಗೆ ಆರೋಪಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಈ ಮಧ್ಯೆ ವಕೀಲರೊಬ್ಬರು ಆರೋಪಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್ ಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾರ್ಚ್ 17ರಂದು ತಮಿಳುನಾಡು ತೌಹೀದ್ ಜಮಾತ್ (ಟಿಎಮ್ ಟಿಜೆ) ಹೆಸರಿನ ಮುಸ್ಲಿಂ ಸಂಘಟನೆಯ ಮುಖಂಡ ಆರ್. ರಹಮತುಲ್ಲಾ ಮಧುರೈನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ.
ಹಿಜಾಬ್ ತೀರ್ಪಿನ ಕಾರಣಕ್ಕಾಗಿ ನ್ಯಾಯಮೂರ್ತಿಗಳು ಕೊಲೆಯಾದರೆ ಅವರ ಸಾವಿಗೆ ಅವರೇ ಕಾರಣರಾಗುತ್ತಾರೆ. ನಾವು ಮೋದಿ, ಅಮಿತ್ ಶಾ ಅಥವಾ ಯೋಗಿ ಆದಿತ್ಯನಾಥ್ ಗೆ ಹೆದರುವುದಿಲ್ಲ. ನಾವು ಅಲ್ಲಾಗೆ ಮಾತ್ರವೇ ಹೆದರುವುದು. ನಮ್ಮನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಬೇಡಿ. ನಾವು ತಾಳ್ಮೆ ಕಳೆದುಕೊಂಡರೆ ನೀವು ಉಳಿವುದಿಲ್ಲ ಎಂದಿದ್ದ.