ವಿಟ್ಲ: ಕೋಳಿ ಮರಿಯನ್ನು ರಕ್ಷಿಸಲು ಹೋಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ನಡೆದಿದೆ.
ವಿಟ್ಲ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಮದರಮೂಲೆ ನಿವಾಸಿ ದಿ. ಮುದ್ದ ಮುಗೇರರ ಪುತ್ರ ವಸಂತ ಮುಗೇರ(37) ಮೃತಪಟ್ಟ ದುರ್ಧೈವಿ.
ಉಪ್ಪಳದ ವಿದ್ಯುತ್ ಗುತ್ತಿಗೆದಾರರ ಕಾರ್ಮಿಕನಾಗಿದ್ದ ವಸಂತ ಕೇರಳದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರದಿಂದಾಗಿ ರಜೆಯಲ್ಲಿದ್ದ. ಶನಿವಾರ ಸಂಜೆ 4ಗಂಟೆಯ ಸುಮಾರಿಗೆ ಮನೆ ಮುಂದಿನ 70ಅಡಿ ಆಳದ ಬಾವಿಗೆ ಬಿದ್ದ ಕೋಳಿ ಮರಿಯನ್ನು ರಕ್ಷಿಸಲು ಮುಂದಾಗಿದ್ದನೆನ್ನಲಾಗಿದೆ.
ಹಗ್ಗ ಕಟ್ಟಿದ ಬುಟ್ಟಿಯನ್ನು ಬಾವಿಗೆ ಇಳಿಸುತ್ತಿದ್ದ ಸಂದರ್ಭ ಬಾವಿಯ ಕಟ್ಟೆ ಕುಸಿದು ವಸಂತ 70ಅಡಿ ಆಳದ ಬಾವಿಗೆ ಬಿದ್ದಿದ್ದು ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ.
ಘಟನಾ ಸ್ಥಳಕ್ಕೆ ವಿಟ್ಲ ಎಸೈ ಸಂದೀಪ್ ಕುಮಾರ್, ಸಿಬ್ಬಂದಿಗಳಾದ ಪ್ರಸನ್ನ, ಜಯಕುಮಾರ್, ಅಶೋಕ್ ಆಗಮಿಸಿದ್ದು ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.


























