ಮಂಗಳೂರು: ಪುತ್ತೂರಿನ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರ ವಹಿಸಿ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದ ಮಾಜಿ ತಹಶೀಲ್ದಾರ್ ಕೋಚಣ್ಣ ರೈ ಚಿಲ್ಮೆತ್ತಾರು (85) ಮಂಗಳೂರಿನಲ್ಲಿ ಮಾ 27 ರಂದು ನಿಧನರಾದರು.
ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಅಲ್ಲಿಯೇ ನಿಧನ ಹೊಂದಿದರು.
ಮೂಲತಃ ಪುತ್ತೂರು ತಾಲೂಕಿನ ಚಿಲ್ಮೆತ್ತಾರು ನಿವಾಸಿಯಾಗಿರುವ ಕೋಚಣ್ಣ ರೈ, 1980-81ರಲ್ಲಿ ಪುತ್ತೂರಿನ ತಹಸೀಲ್ದಾರರಾಗಿ ಸೇವೆ ಸಲ್ಲಿಸಿದವರು. ಅವರ ಸೇವಾವಧಿಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅದ ಮುಂಭಾಗದ ವಿಶಾಲ ಗದ್ದೆ ಸೇರ್ಪಡೆಗೊಂಡಿತ್ತು. ಅಲ್ಲದೇ ಅವರ ಅವಧಿಯಲ್ಲಿ ಬಿರುಮಲೆ ಗುಡ್ಡಯ ಅಭಿವೃದ್ಧಿ ಹಾಗೂ ಬೈಪಾಸ್ ರಸ್ತೆ ನಿರ್ಮಾಣದ ನೀಲಿ ನಕಾಶೆ ತಯಾರಾಗಿತ್ತು.
ಇಂದು ನಾವು ಪುತ್ತೂರಿನಲ್ಲಿ ಕಾಣುವ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವಿಶಾಲ ಪ್ರದೇಶ , ಹಚ್ಚಹಸುರಿನ ಪ್ರವಾಸಿ ತಾಣವಾದ ಬಿರುಮಲೆ ಗುಡ್ಡ ಪುತ್ತೂರಿನ ಬೈಪಾಸ್ ರಸ್ತೆ ಹಾಗೂ ಮೊಟ್ಟೆತ್ತಡ್ಕದಲ್ಲಿ ಗೇರು ಸಂಶೋಧನ ಕೇಂದ್ರ ಕೋಚಣ್ಣ ರೈ ಯವರ ದೂರದೃಷ್ಟಿಯ ಯೋಜನೆಗಳು. ಕೋಚಣರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ಬಿರುದು ನೀಡಿ ಗೌರವಿಸಿದೆ.
ಮೃತರು ಪುತ್ರಿಯರಾದ ವಿಜಯ, ಸುಜಯ, ಪುತ್ರ ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಡಾ.ಮಂಜುನಾಥ್ ಹಾಗೂ ಅಪಾರ ಬಂಧು ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.