ಬಂಟ್ವಾಳ: ದ್ವಿ ಚಕ್ರವಾಹನದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಗೂಡಿನಬಳಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಬೋಳಂತೂರು ನಿವಾಸಿ ಮಹಮ್ಮದ್ ಮುಸ್ತಫಾ ಎನ್ನಲಾಗಿದೆ.
ಆರೋಪಿಯಿಂದ ದ್ವಿ ಚಕ್ರವಾಹನ ಹಾಗೂ ಅದರಲ್ಲಿದ್ದ 20 ಕೆ.ಜಿ.ಮಾಂಸವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಮಹಮ್ಮದ್ ಮುಸ್ತಫಾ ಹಾಗೂ ಸ್ನೇಹಿತ ಇಬ್ಬರು ಸೇರಿ ಅಕ್ರಮವಾಗಿ ದನಗಳನ್ನು ಕದ್ದು ತಂದು ಭಾನುವಾರ ಮನೆಯಲ್ಲಿ ಕಡಿದು ಮಾಂಸ ಮಾಡಿ ಬಳಿಕ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪೋಲೀಸರಿಗೆ ದೊರಕಿದೆ.
ಆರೋಪಿ ದ್ವಿ ಚಕ್ರ ವಾಹನದ ಮೂಲಕ ನಂದಾವರ, ಗೂಡಿನಬಳಿ, ಮಂಚಿ ಸಹಿತ ತಾಲೂಕಿನ ಆಯ್ದ ಕಡೆಗಳಿಗೆ ಮಾರಾಟ ಮಾಡುವುದಾಗಿ ವಿಚಾರಣೆ ವೇಳೆ ಮಾಹಿತಿ ದೊರಕಿದೆ ಎಂದು ತಿಳಿದು ಬಂದಿದೆ.


























