ಪುತ್ತೂರು: ಅತ್ಯಂತ ಕ್ರಿಯಾಶೀಲ ತಾಲೂಕು ಘಟಕ ಎಂದು ಗುರುತಿಸಿ ಕೊಂಡಿರುವ ಪುತ್ತೂರು ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಯೋಜನೆ -ಯೋಚನೆ ಮೂಲಕವಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಹಿರಿಯ ಸಾಹಿತಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಇದರ ಅಧ್ಯಕ್ಷರೂ ಆಗಿರುವ ವಿ.ಬಿ ಅರ್ತಿಕಜೆ ಯವರು ನೂತನವಾಗಿ ದರ್ಬೆಯ ಶ್ರೀ ರಾಮ ಸೌಧದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ನಡೆಸಿದ ಸರಳ ಸಮಾರಂಭದಲ್ಲಿ ಸಾಹಿತ್ಯ ಪರಿಷತ್ತಿನ ನೂತನ ಕಛೇರಿಯನ್ನು ದೀಪ ಪ್ರಜ್ವಲನ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು.
ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ನಾಯಕ್ ದಂಪತಿಗಳು ಎಲ್ಲರನ್ನೂ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ವಿ ಬಿ ಅರ್ತಿಕಜೆ ಯವರಿಗೆ ಶಾಲು ಫಲ ತಾಂಬೂಲ ನೀಡಿ ಉಮೇಶ್ ನಾಯಕ್ ದಂಪತಿಗಳು ಗೌರವಿಸಿದರು. ಕೋಶಾಧ್ಯಕ್ಷ ಡಾ ಹರ್ಷ ಕುಮಾರ್ ರೈ ಅವರು ಅಧ್ಯಕ್ಷ ಉಮೇಶ್ ನಾಯಕ್ ಅವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.ನಂತರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮುಂದಿನ 3 ತಿಂಗಳಲ್ಲಿ ನಡೆಯಲಿರುವ ಕಾರ್ಯಕ್ರಮ ಗಳ ಬಗ್ಗೆ ಚರ್ಚಿಸಲಾಯಿತು.
ಮುಂದಿನ 3 ತಿಂಗಳಲ್ಲಿ ನಡೆಸುವ ಕಾರ್ಯಕ್ರಮಗಳ ವಿವರ
- ಏಪ್ರಿಲ್ 10ರ ಒಳಗಾಗಿ ಕನ್ನಡ ನಾಡಿನಲ್ಲಿ ಕನ್ನಡ ಮಾತಾಡು ಚಳುವಳಿ ಎಂಬ ಶಿರೋನಾಮೆಯಲ್ಲಿ ಹೊರ ರಾಜ್ಯದಿಂದ ಬಂದ ಉದ್ಯೋಗಿಗಳಿಗೆ ಕನ್ನಡದಲ್ಲಿ ಸಂಭಾಷಣೆ ನಡೆಸಲು ಕಲಿಸುವ ಕುರಿತು ಜನ ಜಾಗೃತಿ ಜಾಥ ವನ್ನು ರೋಟರಿ ಹಾಗೂ ಇತರ ಸಂಘ ಸಂಸ್ಥೆಗಳ ಜೊತೆ ಸೇರಿ ದರ್ಬೆಯಿಂದ ಪ್ರಾರಂಭಿಸಿ ಮಿನಿವಿಧಾನಸೌಧ ತನಕ ನಡೆಸುವುದಾಗಿ ನಿರ್ಣಯಿಸಲಾಯಿತು.
- ಮೇ 10 ತಾರೀಖಿನ ಒಳಗಾಗಿ ಪುಸ್ತಕ ಹಬ್ಬ- ಕವಿಗೋಷ್ಠಿ- ಮಲ್ಲೇಪುರಂ ವೆಂಕಟೇಶ್ ಇವರಿಂದ ಕೊಡಲ್ಪಡುವ ಪ್ರಶಸ್ತಿ ಪ್ರದಾನ- ವಿಚಾರ ಸಂಕೀರ್ಣ ಮೂರು ದಿನದ ಕಾರ್ಯಕ್ರಮವನ್ನು ನಡೆಸುವುದಾಗಿ ನಿರ್ಣಯಿಸಲಾಯಿತು.
- ತಾಲೂಕಿನಲ್ಲಿರುವ ಸಾಹಿತಿಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ಕುರಿತು ಪತ್ರಿಕಾ ಪ್ರಕಟಣೆ ನೀಡುವುದಾಗಿ ನಿರ್ಣಯಿಸಲಾಯಿತು.
- ಸಾರ್ವಜನಿಕರಲ್ಲಿರುವ ಪುಸ್ತಕವನ್ನು ಸಂಗ್ರಹಿಸಿ ಅಗತ್ಯವುಳ್ಳ ಶಾಲೆಗಳಿಗೆ ಹಾಗೂ ಗ್ರಂಥಾಲಯಗಳಿಗೆ ನೀಡುವ ಕುರಿತಾದ ಪುಸ್ತಕ ಸಂಗ್ರಹಣಾ ಅಭಿಯಾನ ನಡೆಸುವುದಾಗಿ ನಿರ್ಣಯಿಸಲಾಯಿತು. ಇದರ ಜವಾಬ್ದಾರಿಯನ್ನು ಶ್ರೀಮತಿ ಶಂಕರಿ ಶರ್ಮ ಹಾಗೂ ಶಾಂತ ಪುತ್ತೂರು ಅವರು ವಹಿಸಿಕೊಳ್ಳುವುದಾಗಿ ಒಪ್ಪಿಕೊಂಡರು.
- ಪುತ್ತೂರು ತಾಲೂಕಿನ 32 ಗ್ರಾಮದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಆಯಾ ಗ್ರಾಮದಲ್ಲಿರುವ ಆಸಕ್ತ ಪ್ರತಿನಿಧಿಗಳನ್ನು ನೇಮಕ ಮಾಡುವುದಾಗಿ ನಿರ್ಣಯಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮುಂದಿನ ಯೋಜನೆ ಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು ಮತ್ತು ಯೋಜನೆಯ ಅನುಷ್ಟಾನ ಕ್ಕೆ ಎಲ್ಲರ ಸಹಕಾರ ಕೋರಿದರು.
ಪುತ್ತೂರಿನಲ್ಲಿ ಹತ್ತಾರು ಶಾಶ್ವತ ಜನೋಪಯೋಗಿ ಯೋಜನೆಗಳ ರೂವಾರಿ ನಿವೃತ್ತ ತಹಸೀಲ್ದಾರ್ ಸಿಎಚ್ ಕೋಚಣ್ಣ ರೈ ಅವರು ದೈವಾಧೀನರಾದ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುವ ಸಲುವಾಗಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಹಿರಿಯರಾದ ವಿ ಬಿ ಅರ್ತಿಕಜೆ, ಐತ್ತಪ್ಪ ನಾಯ್ಕ್, ಹೆಚ ಜಿ ಶ್ರೀ ಧರ್ ಮಾರ್ಗದರ್ಶನ ಮಾಡಿದರು. ಇತರ ಸದಸ್ಯರು ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು. ಗೌರವ ಕಾರ್ಯದರ್ಶಿ ಗಳಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿ, ಹರಿಣಿ ಪುತ್ತೂರಾಯ ವಂದಿಸಿದರು.