ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವೀಕರಣಗೊಂಡ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಅಶ್ವತ್ಥ ಪೂಜೆ ಹಾಗೂ ಶನೈಶ್ಚರ ಕಥಾ ಕಲ್ಪೋಕ್ತ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಎ.2 ರಂದು ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಯುಗಾದಿ ಹಬ್ಬವು ಹಿಂದುಗಳ ಹೊಸ ವರ್ಷವಾಗಿದೆ. ಯುಗಾದಿಯನ್ನು ನಮ್ಮ ತುಳುನಾಡಿನ ಹೊಸ ವರ್ಷ ಎಂದು ಘೋಷಣೆ ಮಾಡಿದ ರಾಜ್ಯ ಸರಕಾರ ಯುಗಾದಿ ದಿನವನ್ನು ಧಾರ್ಮಿಕ ದಿನವನ್ನಾಗಿ ಆದೇಶ ಹೊರಡಿಸಿದೆ ಎಂದರು.
ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಮೂಲಕ ಗೋ ಶಾಲೆ ಆರಂಭ, ದೇವಸ್ಥಾನಗಳ ರಕ್ಷಣೆಗೆ ಮಸೂದೆ, ಗೋಹತ್ಯೆ ನಿಷೇದ ಕಾನೂನು ಜಾರಿ, ಗೊತಳಿಗಳ ಅಭಿವೃದ್ಧಿಗೆ ಜೊತೆಗೆ ಗೋವಿನ ಉತ್ಪನ್ನಗಳ ಬ್ಯಾಂಕ್ ಆರಂಭಕ್ಕೆ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಮೂಲಕ ದೇವಸ್ಥಾನ, ದೈವಸ್ಥಾನದ ರಕ್ಷಣೆ ಜೊತೆಗೆ ಗೋವುಗಳ ರಕ್ಷಣೆಗೆ ಮುಂದಾಗಿದ್ದು ಮುಂದಿನ ಆರ್ಥಿಕ ವರ್ಷದಿಂದ ಅನುಷ್ಠಾನವಾಗಲಿದೆ ಎಂದ ಶಾಸಕರು ಹಿಂದುತ್ವದ ನೆಲೆಯಲ್ಲಿ ಸರಕಾರ ಆಡಳಿತ ಆಡಳಿತ ನಡೆಸಿದರೆ ಏನೆಲ್ಲಾ ಬದಲಾವಣೆ ಮಾಡಬಹುದು ಎಂಬುದನ್ನು ಪ್ರಧಾನಿಯವರು ತೋರಿಸಿಕೊಟ್ಟಿದ್ದಾರೆ. ರಾಮಮಂದಿರ ನಿರ್ಮಾಣ, ಭವ್ಯ ಕಾಶಿ ನಿರ್ಮಾಣದ ಮೂಲಕ ಭಾರತದ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಹಿಂದು ಧರ್ಮದ ವಿರುದ್ಧ ಷಡ್ಯಂತ್ರಗಳ ನಡೆಯುತ್ತಲೇ ಇದೆ. ಶಾಲೆಯಲ್ಲಿ ಧರ್ಮದ ಹೆಸರಿನಲ್ಲಿ ಹಿಜಾಬ್ ವಿವಾದದ ಮೂಲಕ ಪ್ರತ್ಯೇಕವಾದ ಸೃಷ್ಟಿಸಿದ್ದಾರೆ. ಇದರ ಮೂಲಕ ಹಿಂದು ಸಮಾಜಕ್ಕಿರುವ ಅಪಾಯವನ್ನು ಎಚ್ಚರಿಸಿದ್ದಾರೆ. ಹಿಂದು ಸಮಾಜ ಸುಭದ್ರವಾಗಿರಬೇಕಾದರೆ ನಮ್ಮಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಆವಶ್ಯಕ ಎಂದರು.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಘಟನೆ ಶಕ್ತಿಯುತವಾಗಿ ಬೆಳೆಯುತ್ತಿದೆ ಎಂದರು. ದೇವಸ್ಥಾನದ ಸಂಪರ್ಕ ರಸ್ತೆ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮಾತನಾಡಿ, ದೇವಸ್ಥಾನದಲ್ಲಿ ದಾನಿಗಳು ಹಾಗೂ ಭಕ್ತರ ಸಹಕಾರದಿಂದ ಅನ್ನಬೇಯಿಸುವ ಸ್ಟೀಮ್ ಹಾಗೂ ಅಜಿರ್ಣಾವಸ್ಥೆಯಲ್ಲಿದ್ದ ಅಶ್ವತ್ಥ ಕಟ್ಟೆ ಸಂಪ್ರದಾಯದಂತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಬಹು ವರ್ಷಗಳ ಬೇಡಿಕೆಯಾದ ಹಣ್ಣುಕಾಯಿ ಅಂಗಡಿ ನಿರ್ಮಿಸಲಾಗುವುದು. ಜೊತೆಗೆ ಹಂತ ಹಂತವಾಗಿ ಅಭಿವೃದ್ಧಿ ನಡೆಸಲಾಗುವುದು. ಇದಕ್ಕೆಲ್ಲಾ ಭಕ್ತಾದಿಗಳು ಸಹಕರಿಸುವಂತೆ ಮನವಿ ಮಾಡಿದರು.
ಬೆಳಿಗ್ಗೆ ಸ್ವಸ್ತಿ ಪುಣ್ಯಾಹ, ಕಲಶ ಪೂಜೆ, ಅಶ್ವತ್ಥ ಕಲ್ಪೋಕ್ತ ಪೂಜೆ ನಡೆಯಿತು. ಸಂಜೆ ಸಾರ್ವಜನಿಕ ಶನೈಶ್ಚರ ಕಥಾ ಕಲ್ಪೋಕ್ತ ಪೂಜೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಪದ್ಮ ಸೋಲಾರ್ ಮ್ಹಾಲಕ ಪದ್ಮನಾಭ ಶೆಟ್ಟಿ, ಪ್ರಸಾದ್ ಇಂಡಸ್ಟ್ರೀಸ್ ಮ್ಹಾಲಕ ಶಿವಪ್ರಸಾದ್ ಶೆಟ್ಟಿ, ನಿವೃತ್ತ ಸೈನಿಕ ಸುಬ್ರಹ್ಮಣ್ಯ ರಾವ್ ಕೆಮ್ಮಿಂಜೆ, ಶ್ರೀಧರ ಹೆಗ್ಡೆ ಏಳ್ಮುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಗೌಡ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರಶೇಖರ ವಂದಿಸಿದರು. ಪ್ರಜ್ಞಾ ಓಡಿನ್ನಾಳ ಕಾರ್ಯಕ್ರಮ ನಿರೂಪಿಸಿದರು.




























