ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಸಂಭ್ರಮ. ಪುತ್ತೂರು ಜಾತ್ರೆಗೆ ಜಿಲ್ಲೆಯಲ್ಲಿಯೇ ವಿಶೇಷ ಮಹತ್ವವಿದೆ. ಏ.1ರಂದು ಗೊನೆ ಕಡಿಯುವುದರೊಂದಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ ದೊರೆತಿದೆ.
ಏ.10 ರಂದು ಧ್ವಜಾರೋಹಣ ನಡೆದು ನಂತರ ವಿವಿಧೆಡೆ ಪೇಟೆ ಸವಾರಿ ಕಟ್ಟೆ ಪೂಜೆ ನಡೆದಿದೆ.
ಏ.16ರಂದು ರಾತ್ರಿ ಉತ್ಸವ, ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ, ಪಲ್ಲಕ್ಕಿ ಉತ್ಸವ ನಡೆದು ಸಣ್ಣ ರಥೋತ್ಸವ, ಕೆರೆ ಆಯನ ಜರಗಿತು. ಏ.೧೭ ರಂದು ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ‘ಬ್ರಹ್ಮರಥೋತ್ಸವ’ ಹಾಗೂ ‘ಪುತ್ತೂರು ಬೆಡಿ’ ಪ್ರದರ್ಶನ ನಡೆಯಲಿದೆ.
ಏ.17ರಂದು ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ ನಡೆಯಲಿದ್ದು ರಾತ್ರಿ ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ಧಿ ಪಡೆದಿರುವ ಸುಡುಮದ್ದು ಪ್ರದರ್ಶನದ ಬಳಿಕ ಬ್ರಹ್ಮರಥೋತ್ಸವ ನಡೆಯಲಿದೆ.
ನಂತರ ಬಂಗಾರ್ ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತ ಬಲಿ, ಶಯನ ನಡೆಯಲಿದೆ. ಎ.18 ರಂದು ಅವಭೃತ ಸವಾರಿ. ಎ.18ರಂದು ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ, ತುಲಾಭಾರ ಸೇವೆ, ಸಂಜೆ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ, ಎ.19ರಂದು ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಹುಲಿ ಭೂತ, ರಕ್ತೇಶ್ವರಿ ನೇಮ, ಏ.20ರಂದು ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಣತ್ತಾಯ, ಪಂಜುರ್ಲಿ ದೈವಗಳ ನೇಮ ನಡೆಯಲಿದೆ.