ಪುತ್ತೂರು: 4 ದಿನಗಳ ಹಿಂದೆ ಮಾ 18 ರಂದು ರಾತ್ರಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಮೈ ಮೇಲೆ ಒಂದಷ್ಟು ಗಾಯದ ಗುರುತುಗಳೊಂದಿಗೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಸುಳ್ಯದ ಪತ್ರಕರ್ತರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಮಠ ದಿ. ಹೊನ್ನಪ್ಪ ಗೌಡರ ಪುತ್ರ, ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ, ಪತ್ರಕರ್ತ ದಿನೇಶ್ ಮಠ (35 ) ನಿಧನ ಹೊಂದಿದವರು.
ಮಾ .18ರಂದು ರಾತ್ರಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಪ್ರಜ್ಞೆ ಕಳಕೊಂಡು ಬಿದ್ದಿದ್ದ ಅವರನ್ನು ಅಲ್ಲಿನ ಸಿಬ್ಬಂದಿಗಳು, ಪೊಲೀಸ್ ಸಹಾಯವಾಣಿಯ ಸಿಬ್ಬಂದಿಗಳ ನೆರವಿನಿಂದ ಅಂಬ್ಯುಲೆನ್ಸ್ ಮೂಲಕ ಪುತ್ತೂರಿನ ಸರಕಾರಿ ಅಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಕೋಮಾಕ್ಕೆ ಜಾರಿದ್ದ ಅವರು ಮಾ 22 ರಂದು ಸಂಜೆ ಇಹಲೋಕ ತ್ಯಜಿಸಿದರು. ದಿನೇಶ್ ಅವರು ಸುಳ್ಯದ ಅಮರ ಸುಳ್ಯ ಸುದ್ದಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿದ್ದುಕೊಂಡು ಕನಕಮಜಲಿನಲ್ಲಿ ಅಂಗಡಿ ನಡೆಸುತ್ತಾ ಕೃಷಿ ಕಾರ್ಯ ನಡೆಸುತ್ತಿದ್ದರು.