ವಿಟ್ಲ: ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನ್ನನ್ನು ಕೊಲೆಗೈದ ಘಟನೆ ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಐತಪ್ಪ ನಾಯ್ಕ್(45) ಬಂಧಿತ ಆರೋಪಿ.
ಎಣ್ಮಕಜೆ ಗ್ರಾಮದ ಅಡ್ಯನಡ್ಕ ನಿವಾಸಿ ಬಾಲಪ್ಪ ನಾಯ್ಕ್ ಮಂಗಳವಾರ ಸಂಜೆ ತರವಾಡು ಮನೆಗೆ ತನ್ನ ತಾಯಿ ಜತೆ ಬಂದಿದ್ದರು. ಮಂಗಳವಾರ ಹೊಸ ಮನೆಯಲ್ಲಿ ಗೊಂದೋಳು ಪೂಜೆ ನಡೆಯುತ್ತಿದ್ದು, ಈ ವೇಳೆ ಸಹೋದರರಿಬ್ಬರೂ ತಕಾರಾರು ಇರುವ ಜಾಗದಲ್ಲಿ ಬೆಳೆದ ಭತ್ತ ಫಸಲಿನಲ್ಲಿ ಪಾಲು ಕೇಳಿದ ವಿಚಾರವಾಗಿ ಗಲಾಟೆ ಉಂಟಾಗಿದೆ ಎನ್ನಲಾಗಿದೆ.
ಜಗಳ ತಾರಕ್ಕಕ್ಕೇರಿ ಅಣ್ಣ ತಮ್ಮನನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರ 73/2022 ಕಲಂ 302 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ ಸೋನಾವಣೆ IPS ಮತ್ತು ಅಡಿಷನಲ್ ಎಸ್‌ಪಿ ಕುಮಾರಚಂದ್ರ, ಬಂಟ್ವಾಳ ಉಪವಿಭಾಗದ ಎಎಸ್‌ಪಿ ಶಿವಾಂಶು ರಜಪೂತ IPS ರವರುಗಳ ಮಾರ್ಗದರ್ಶನದಲ್ಲಿ ನಾಗರಾಜ್ ಹೆಚ್ ಈ ಪೊಲೀಸ್ ನಿರೀಕ್ಷಕರು ವಿಟ್ಲ ಠಾಣೆ ರವರ ನೇತೃತ್ವದಲ್ಲಿ ಪಿ ಎಸ್ ಐ ಮಂಜುನಾಥ ಟಿ, ಪ್ರೋ.ಪಿ ಎಸ್ ಐ ಗಳಾದ ಧನಂಜಯ, ಬಿ.ಸಿ, ಜಯಶ್ರೀ ಪ್ರಭಾಕರ್ ಹಾಗೂ ಸಿಬ್ಬಂದಿಗಳ ತಂಡ ಪಾಲ್ಗೊಂಡಿದ್ದರು.