ಮಂಗಳೂರು: ಕೋಳಿ ಅಂಕದಲ್ಲಿ ಹುಂಜದ ಕಾಲಿಗೆ ಕಟ್ಟಿದ್ದ ಬಾಳ್ (ಸಣ್ಣ ಚೂರಿ) ಅಂಕ ನೋಡಲು ಬಂದ ವ್ಯಕ್ತಿಗೆ ತಾಗಿ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಗ್ರಾಮದ ಖಂಡಿಗೆ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ವಿಟ್ಲ ಕೇಪು ನಿವಾಸಿ ಚಂದ್ರಹಾಸ ಎಂದು ಗುರುತಿಸಲಾಗಿದೆ.
ಮೇ.17 ರಂದು ಸಂಜೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಗ್ರಾಮದ ಖಂಡಿಗೆ ಎಂಬಲ್ಲಿ ಶ್ರೀ ಧರ್ಮಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ನಡೆದಿತ್ತು. ಅದರ ಪ್ರಯುಕ್ತ ದೈವಸ್ಥಾನದ ಹಿಂಬದಿ ಗದ್ದೆಯಲ್ಲಿ ದೇವದಾಸ್ ಮುಂಚೂರು ಹಾಗೂ ಹರೀಶ ಎಂಬವರು ಕೋಳಿಗಳ ಕಾಲಿಗೆ ಬಾಳ್ ಅನ್ನು ಕಟ್ಟಿ ಕಾದಡಲು ಬಿಟ್ಟಿದ್ದರು.
ಈ ವೇಳೆ ಕಲ (ಕಾದಾಡುವ ಸ್ಥಳ) ದಿಂದ ಹಾರಿ ಓಡಿಹೋಗಲು ಯತ್ನಿಸಿದ ಹುಂಜವೊಂದು ಅಲ್ಲೇ ಅಂಕ ವೀಕ್ಷಿಸುತ್ತಿದ್ದ ಚಂದ್ರಹಾಸ ಎಂಬವರ ಬಲಕಾಲಿಗೆ ಬಾಳ್ ನಿಂದ ತಿವಿದಿದೆ.
ಗಂಭೀರ ಗಾಯಗೊಂಡ ಚಂದ್ರಹಾಸ ರವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.