ವಿಟ್ಲ: ಮನೆಯ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.
ಕೊಳ್ನಾಡು ಗ್ರಾಮ ಕಟ್ಟೆ ಮನೆ ನಿವಾಸಿ ಕೆ.ಎಂ ಮಹಮ್ಮದ್(60) ಎನ್ನುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಮನೆಗೆ ನುಗ್ಗಿದ ಕಳ್ಳರು ಸುಮಾರು 5 ಪವನ್ ತೂಕದ ನಕ್ಲೇಸ್-01, ಸುಮಾರು 1 ಪವನ್ ತೂಕದ ಸರ-01, ಸುಮಾರು ಅರ್ದ ಪವನ್ ತೂಕದ ಉಂಗುರ-01, ಹಾಗೂ ಗೋದ್ರೇಜ್ ಪಕ್ಕದಲ್ಲಿದ್ದ ಮೇಜಿನ ಡ್ರವರ್ ಒಳಗೆ ಇದ್ದ 5000/- ನಗದು ದೋಚಿದ್ದಾರೆ ಎನ್ನಲಾಗಿದೆ.
ಮಹಮ್ಮದ್ ಮೇ.19 ರಂದು ಮನೆಗೆ ಬೀಗ ಹಾಕಿ ಮನೆಯವರೊಂದಿಗೆ ತಂಗಿಯ ಮನೆಗೆ ಹೋಗಿದ್ದು, ಮೇ.20 ರಂದು ಮನೆಗೆ ಬಂದು ಬೀಗ ತೆಗೆದು ಮನೆಯ ಒಳಗೆ ನೋಡುವಾಗ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿತ್ತು. ಮನೆಯ ಮಾಡಿನ ಹಂಚು ತೆಗೆದಿರುವುದು ಕಂಡು ಬಂದಿದ್ದು, ನಂತರ ಕೋಣೆಗೆ ಹೋದಾಗ ಗೋದ್ರೇಜ್ ಬಾಗಿಲು ತೆರೆದಿರುವುದು ಕಂಡು ಬಂದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕಳ್ಳತನವಾದ ಚಿನ್ನಾಭರಣಗಳ ಮೌಲ್ಯ 1,40,000/- ರೂ ಆಗಬಹುದು ಎಂದು ತಿಳಿದು ಬಂದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 77/2022 ಕಲಂ:454,457,380 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ.