ಪುತ್ತೂರು: ಶಾಂತಿಗಿರಿ ವಿದ್ಯಾ ನಿಕೇತನ ಶಾಲೆಯ 2022-23 ನೇ ಶೈಕ್ಷಣಿಕ ಸಾಲಿನ ಶಿಕ್ಷಕ – ರಕ್ಷಕರ ವಾರ್ಷಿಕ ಮಹಾಸಭೆಯನ್ನು ಶಾಂತಿಗಿರಿ ವಿದ್ಯಾ ನಿಕೇತನ ಶಾಲೆ , ಡಯೋಸಿಸ್ ಆಫ್ ಪುತ್ತೂರು ಇದರ ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಲಾಯಿತು. ಸಭೆಯಲ್ಲಿ ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು. ಉಪಾಧ್ಯಕ್ಷರಾಗಿ ಸಂತೋಷ್, ಕಾರ್ಯದರ್ಶಿಯಾಗಿ ರಾಕೇಶ್ ಮತ್ತು ಖಜಾಂಜಿಯಾಗಿ ಆಶಾರಾಣಿ ರವರು ಅವಿರೋಧವಾಗಿ ಆಯ್ಕೆಗೊಂಡರು.

ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮೌಲಾನಾ ಆಜಾದ್ ಮಾದರಿ ಶಾಲೆಯ ಉಪ ಪ್ರಾಂಶುಪಾಲರಾದ ಮಹಮ್ಮದ್ ತೌಫೀಕ್ ರವರು ಶಿಕ್ಷಣದ ಮಹತ್ವದ ಕುರಿತು ಮಾತನಾಡಿ ಪೋಷಕರು ಗೌರವ,ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಮಕ್ಕಳ ಕಲಿಕಾ ಬೆಳವಣಿಗೆ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು. ಜೊತೆಗೆ ವಿವಿಧ ಇಲಾಖೆಗಳಿಂದ ನಿಗದಿಸಲ್ಪಟ್ಟಿರುವ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಲ್ಮಾ ಮೊಂತೆರೋ ರವರು ವಿದ್ಯಾ ಸಂಸ್ಥೆಯ ಬೆಳವಣಿಗೆಯ ಹಾದಿ, ಶಾಲಾ ನೀತಿ ನಿಯಮಗಳು ಮತ್ತು 2022- 23ನೇ ಸಾಲಿನ ಶಾಲೆಯ ಮಾಹಿತಿ ವಿವರಗಳ ವರದಿಯನ್ನು ವಾಚಿಸಿದರು.
ಶಾಲಾ ಸಂಚಾಲಕರಾದ ರೆ. ಫಾ. ಬಿಜು ಕೆ. ಜಿ ರವರು ಆಯ್ಕೆಗೊಂಡ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ಪ್ರಸ್ತುತ ಶಾಲೆಯು 4 ನೇ ವರ್ಷಕ್ಕೆ ಪಾದಾರ್ಪಣೆ ಗೊಳ್ಳುತ್ತಿದ್ದು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಲಭಿಸುವ ಬಗ್ಗೆ ಹಾಗೂ ಪೋಷಕರ ಕನಸು ನನಸಾಗುವ ಮೂಲಕ ಪ್ರತೀ ವಿದ್ಯಾರ್ಥಿಯು ಬೆಳೆಯುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಯನ್ನು ಸನ್ಮಾನಿಸಲಾಯಿತು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ ಸ್ವಾಗತಿಸಿದರು.
ಶೈಲಜಾ ಆರ್ ಶೆಟ್ಟಿ ಮತ್ತು ಅಶ್ವತಿ ಅರವಿಂದ್ ಸದಸ್ಯರನ್ನು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಕಾವ್ಯ ವಂದಿಸಿದರು. ಸಭೆಯಲ್ಲಿ ಶಾಂತಿಗಿರಿ ವಿದ್ಯಾ ನಿಕೇತನ ಶಾಲೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

























