ಮಂಗಳೂರು: ಎಸ್‌ಡಿಪಿಐ ಸಮಾವೇಶದ ವೇಳೆ ಪೊಲೀಸರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಸಫ್ವಾನ್ ಯಾನೆ ಫಹಾದ್ (26), ಅಬ್ದುಲ್ ಸಲಾಂ (23), ಸೂರಲ್ಪಾಡಿಯ ಮೊಹಮ್ಮದ್ ಹುನೈಜ್ (23), ಗುರುಪುರದ ಮೊಹಮ್ಮದ್ ಸಾಹಿಲ್ (23), ಮೊಹಮ್ಮದ್ ಫಲಾಹ್ (20), ಇನೋಳಿಯ ಅಬ್ದುಲ್ ಲತೀಫ್ (31) ಬಂಧಿತ ಆರೋಪಿಗಳು.

ಮೇ 27ರಂದು ನಡೆದ ಎಸ್‌ಡಿಪಿಐ ಸಮಾವೇಶದ ವೇಳೆ ಘಟನೆ ನಡೆದಿತ್ತು. ಯುವಕರ ಗುಂಪೊಂದು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಬೈಕ್‌ಗಳಲ್ಲಿ ವೇಗವಾಗಿ ಚಲಿಸುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಘಟನೆ ಸಂಬಂಧಿಸಿ 9 ಮಂದಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು.
ನಿನ್ನೆ ರಾತ್ರಿ ಕಂಕನಾಡಿ ಪೊಲೀಸರು ಮತ್ತೆ 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಇದರಲ್ಲಿ ಸಫ್ವಾನ್ ಎಂಬಾತ ಆರೋಪಿಗಳು ಪೊಲೀಸರ ವಿರುದ್ಧ ನಿಂದನೆಯ ಘೋಷಣೆ ಕೂಗುವುದನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ದ. ಆರೋಪಿಗಳ ವಿರುದ್ಧ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

























