ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥಾಪನಾ ಸಮಿತಿಯವರು ಹಣ ದುರುಪಯೋಗ ಮಾಡಿರುತ್ತಾರೆ ಈ ಹಿನ್ನೆಲೆ ಸಮಿತಿಯನ್ನು ವಜಾಗೊಳಿಸಿ ಅವರ ವಿರುದ್ಧ ತಕ್ಷಣ ತನಿಖೆ ನಡೆಸುವಂತೆ ಆಗ್ರಹಿಸಿ ದೇವಸ್ಥಾನದ ಭಕ್ತಾದಿಗಳು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಮುಂಡೂರು ಗ್ರಾಮದ ಪ್ರಧಾನ ದೇವಸ್ಥಾನದಲ್ಲಿ ಸದ್ರಿ ಆಡಳಿತ ನಡೆಸುತ್ತಿರುವ ವ್ಯವಸ್ಥಾಪನಾ ಸಮಿತಿಯವರು ಸುಮಾರು 10 ಲಕ್ಷ ರೂ. ಅವ್ಯವಹಾರ ನಡೆಸಿರುತ್ತಾರೆ. ಈ ವ್ಯವಹಾರದ ಕುರಿತು ಪ್ರತ್ಯಕ್ಷ ಸಾಕ್ಷಿಯಾಗಿ ದೇವಸ್ಥಾನದ ಬ್ಯಾಂಕ್ ಖಾತೆ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನರಿಮೊಗರು ಶಾಖೆಯ ಖಾತೆಯಿಂದ ಸುಮಾರು 10 ಲಕ್ಷದಷ್ಟು ಹಣವನ್ನು ಚೆಕ್ ಗಳ ಮೂಲಕ ನಗದೀಕರಿಸಿರುತ್ತಾರೆ.
ಭಕ್ತಾದಿಗಳು ದೇಣಿಗೆ ಮೂಲಕ ಗ್ರಾಮದ ದೇವಸ್ಥಾನಕ್ಕೆ ನೀಡಿದ ಹಣವನ್ನು ಈ ರೀತಿಯಾಗಿ ಅವ್ಯವಹಾರ ನಡೆಸಿರುವುದು ಭಕ್ತಾದಿಗಳಲ್ಲಿ ಆತಂಕ ಉಂಟುಮಾಡಿದೆ. ಈ ಹಿನ್ನೆಲೆ ತಕ್ಷಣ ವ್ಯವಸ್ಥಾಪನ ಸಮಿತಿಯನ್ನು ವಜಾಗೊಳಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.

























