ನೆಲ್ಯಾಡಿ: ಧ್ಯಾನ ಮಂದಿರದ ಹೆಸರಿನಲ್ಲಿ ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆಗಳು ದಾಳಿ ನಡೆಸಿದ ಘಟನೆ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಆರ್ಲ ಎಂಬಲ್ಲಿ ನಡೆದಿದೆ.

ಮೋರ್ಯ ಎಂಬ ಧ್ಯಾನ ಮಂದಿರದ ಹೆಸರಿನಲ್ಲಿ ಅನಧಿಕೃತ ಕಟ್ಟಡದಲ್ಲಿ ಅಮಾಯಕ ಹಿಂದೂಗಳ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಶಿಕಾರಿಪುರ ಮೂಲದ ಹಿಂದೂಗಳನ್ನು ಕರೆ ತಂದು ಅಕ್ರಮವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ರವಿ ಪ್ರಸಾದ್ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ ಭೇಟಿ ನೀಡಿದ್ದು, ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಹಾಗೂ ನೂರಾರು ಹಿಂದೂಗಳ ಮತಾಂತರಕ್ಕೆ ಯತ್ನಿಸುತ್ತಿರುವ ಕ್ರಿಶ್ಚಿಯನ್ ಮಿಷನರಿಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಿಂದೂಗಳನ್ನು ಕರೆ ತಂದು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಧ್ಯಾನ ಮಂದಿರದ ಹೆಸರಿನಲ್ಲಿ ಅಕ್ರಮ ಮತಾಂತರ ನಡೆಸುತ್ತಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

























