ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಉಚ್ಛಾಟಿತ ನಾಯಕರು ಸೃಷ್ಟಿಸಿದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಪ್ರವಾದಿ ಮೊಹಮ್ಮದ್ ಅವರಿಗೆ ಅವಮಾನ ಮಾಡಿದ್ದರಿಂದ ಭಾರತದ ವಿರುದ್ಧ ಮುನಿಸಿಕೊಂಡಿರುವ ಇಸ್ಲಾಮಿಕ್ ರಾಷ್ಟ್ರಗಳು, ಭಾರತದಿಂದ ಸ್ಪಷ್ಟನೆ ಬಯಸಿವೆ.
ಬಿಜೆಪಿಯ ಉಚ್ಛಾಟಿತ ನಾಯಕರ ಹೇಳಿಕೆಗಳಿಂದ ಕೆಂಡಾಮಂಡಲವಾಗಿರುವ ಗಲ್ಫ್ ರಾಷ್ಟ್ರಗಳು, ಭಾರತದಿಂದ ಸ್ಪಷ್ಟನೆ ಬಯಸಿವೆ. ಈಗಾಗಲೇ ಕತಾರ್, ಕುವೈತ್, ಇರಾನ್ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿವೆ.
ಪ್ರವಾದಿ ಮೊಹಮ್ಮದರ ಬಗೆಗಿನ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟದ (ಒಐಸಿ) ಟೀಕೆಗಳು ‘ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು’ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ, ‘ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಇತ್ತೀಚಿನ ಹೇಳಿಕೆಗೆ ಸಂಬಂಧಿಸಿದ ಮಾಧ್ಯಮದ ವರದಿಗಳನ್ನು ಗಮನಿಸಿದ್ದೇವೆ. ಒಐಸಿಯ ಅನಗತ್ಯ ಮತ್ತು ಸಂಕುಚಿತ ಮನೋಭಾವದ ಹೇಳಿಕೆಗಳನ್ನು ಭಾರತ ಸರ್ಕಾರವು ಸ್ಪಷ್ಟವಾಗಿ ತಿರಸ್ಕರಿಸುತ್ತದೆ’ ಎಂದು ಹೇಳಿದ್ದಾರೆ. ಭಾರತ ಸರ್ಕಾರವು ಎಲ್ಲಾ ಧರ್ಮಗಳ ವಿಚಾರದಲ್ಲಿ ಅಪಾರವಾದ ಗೌರವ ಹೊಂದಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


























