ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದಕ್ಕೆ ಹೆತ್ತವರೇ ಅಪ್ರಾಪ್ತ ಮಗಳನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಮೃತ ಯುವತಿ ಪಕ್ಕದ ಗ್ರಾಮದ ಯುವಕನನ್ನ ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಇವರಿಬ್ಬರ ಪ್ರೀತಿಗೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಮದುವೆಯಾಗಲು ನಿರ್ಧರಿಸಿದ್ದ ಯುವತಿ ಪ್ರಿಯಕರನಿಗಾಗಿ ಮನೆ ಬಿಟ್ಟು ಬಂದಿದ್ದಳು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಆದರೆ ಯುವತಿ ಪೊಲೀಸರ ಎದುರೇ ನಾನು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಕಾರಣ ಯುವತಿಯನ್ನ ಬಾಲಮಂದಿರದ ವಶಕ್ಕೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ಮಗಳನ್ನು ಪೋಷಕರು ಮನೆಗೆ ಕರೆತಂದಿದ್ದರು. ಈ ನಡುವೆ ನಿಗೂಢವಾಗಿ ಕೊಲೆಯಾಗಿರುವ ಯುವತಿಯ ಮೃತದೇಹ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿದೆ.
ಈ ಕುರಿತು ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತಂದೆ, ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ತಮಗೆ ಅವಮಾನ ಮಾಡಿದಕ್ಕೆ ತಾವೇ ಮಗಳನ್ನು ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂ.6- ಜು.9ರವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..

























