ಪುತ್ತೂರು: ಕೋಡಿಂಬಾಡಿ ಗ್ರಾಮದ ಪರನೀರು ನಿವಾಸಿಗಳಾದ ಸುಮಾರು 14 ಕುಟುಂಬಗಳು ಕಳೆದ 23 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ರಸ್ತೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದು ಇದರ ಸ್ಥಳ ಪರಿಶೀಲನೆಗಾಗಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಜೂ 10 ರಂದು ಭೇಟಿ ನೀಡಿದರು.

ಡೆಕ್ಕಾಜೆ ಎಂಬಲ್ಲಿಂದ ಪರನೀರು ಎಂಬಲ್ಲಿ ಸುಮಾರು 14 ಕುಟುಂಬಗಳ ತೋಟ ಹಾಗೂ ಜಮೀನಿದ್ದು ನಾಲ್ಕು ಕುಟಂಬಗಳು ಮನೆ ನಿರ್ಮಿಸಿ ವಾಸಿಸುತ್ತಿದ್ದಾರೆ. ಈ ಮನೆಗಳಿಗೆ ವಾಹನ ಸಂಚಾರಿಸುವ ರಸ್ತೆಯಿಲ್ಲ . ಹೀಗಾಗಿ ಕೋಡಿಂಬಾಡಿ ಗ್ರಾಮದ ಡೆಕ್ಕಾಜೆಯಿಂದ ಸರಕಾರಿ ಜಮೀನಿನಲ್ಲಿ ರಸ್ತೆ ನೀಡಬೇಕೆಂದು ಕೋರಿ ಇವರು ಸರಕಾರದ ವಿವಿಧ ಇಲಾಖೆಗಳಿಗೆ ಬೇಡಿಕೆ ಸಲ್ಲಿಸಿದ್ದರು. 1999 ರಿಂದ ಈ ವಿವಾದ ಚಾಲ್ತಿಯಲ್ಲಿದೆ. ಈ ಕುಟುಂಬಗಳು ಬೇಡಿಕೆ ಸಲ್ಲಿಸಿರುವ ರಸ್ತೆಯು ಜಮೀನು ತನ್ನ ಕುಮ್ಕಿ ಜಮೀನು( ಸರ್ವೆ ನಂಬ್ರ 74) ಹಾಗೂ ಆದರಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ಧೇನೆ ಎಂಬ ಆಕ್ಷೇಪಣೆಯನ್ನು ಸ್ಥಳೀಯ ಡೆಕ್ಕಾಜೆ ನಿವಾಸಿ ವೀರಪ್ಪ ಪೂಜಾರಿ ಸಲ್ಲಿಸಿದ್ದು ಹೀಗಾಗಿ ಈ ರಸ್ತೆ ಬೇಡಿಕೆಯು ನೆನೆಗುದಿಗೆ ಬಿದ್ದಿತ್ತು.

ಸ್ಥಳವನ್ನು ಪುತ್ತೂರು ಸಹಾಯಕ ಆಯುಕ್ತರು, ತಹಸೀಲ್ದಾರ್ ರಮೇಶ್ ಬಾಬು ಅವರು ಜಂಟಿಯಾಗಿ ಪರಿಶೀಲನೆ ನಡೆಸಿದರು. ಆದರೇ ಈ ವೇಳೆ ರಸ್ತೆಗೆ ಜಾಗ ನೀಡಲು ವೀರಪ್ಪ ಪೂಜಾರಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೇ ಎಸಿಯವರು ಸುಮಾರು 500 ಮೀ ದೂರ ಕ್ರಮಿಸಿ ಜಾಗ ಪರಿಶೀಲನೆ ನಡೆಸಿದರು. ಬಳಿಕ ಅವರು “ ಸದ್ಯ ಈ ರಸ್ತೆಗೆ ಸಂಬಂಧಪಟ್ಟ ಕಡತ ತಹಶೀಲ್ದಾರ್ ಕಚೇರಿಯಲ್ಲಿದ್ದು , ಅವರು ಅದಕ್ಕೆ ಸಂಬಂಧಿಸಿದಂತೆ ಕಾನೂನಿನಂತೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಅಲ್ಲದೇ ರಸ್ತೆಗೆ ಜಾಗ ದೊರಕಿಸಿಕೊಡುವ ಬಗ್ಗೆ ಸರ್ವೆ ನಡೆಸುವಂತೆಯೂ ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದರು. ಅಲ್ಲದೇ,ಈ ಜಮೀನು ಮಾತ್ರವಲ್ಲದೇ ಈ ಕುಟುಂಬಗಳಿಗೆ ರಸ್ತೆ ನಿರ್ಮಿಸಲು ಬೇರೆ ಕಡೆಯಿಂದ ಆಯ್ಕೆಗಳಿದ್ದರೇ ಅದನ್ನು ಪರಿಶೀಲನೆ ನಡೆಸಬೇಕು. ಅಲ್ಲಿ ಆ ಜಾಗಕ್ಕೆ ಸಂಬಂಧಪಟ್ಟವರ ಒಪ್ಪಿಗೆ ಪಡೆದು ರಸ್ತೆಗೆ ಅಗತ್ಯ ಜಾಗ ಗುರುತು ಮಾಡಿ ಕೊಡಿ ಎಂದು ತಹಶೀಲ್ದಾರ್ ಗೆ ಸ್ಥಳದಲ್ಲಿಯೇ ಸೂಚಿಸಿದರು.


ರಸ್ತೆಗಾಗಿ ಮನವಿ ಸಲ್ಲಿಸಿದ ಕುಟುಂಬದವರಿಗೆ ಹಾಗೂ ರಸ್ತೆಗೆ ಆಕ್ಷೇಪಣೆ ಸಲ್ಲಿಸಿದ ಕುಟುಂಬಸ್ಥರಿಗೆ ಹಿತವಚನ ಹೇಳಿದ ಸಹಾಯಕ ಆಯುಕ್ತರು ಇಂತಹ ಸಣ್ಣ ತಕರಾರುಗಳನ್ನು ನಿಮ್ಮ ನಿಮ್ಮಲೆ ಮುಗಿಸಬಹುದು. ಕೋರ್ಟು ಕಟ್ಲೆ ಅಂತಾ ಹೋಗಿ ಸಮಯ ಹಾಗೂ ಹಣ ಹಾಳು ಮಾಡಬೇಡಿ ಎಂದು ಹೇಳಿದರು . ಅಲ್ಲದೇ ವಾರ ಅಥಾವ 10 ದಿವಸದೊಳಗೆ ತಮ್ಮ ತಮ್ಮಲೇ ವಿವಾದ ಇತ್ಯರ್ಥಪಡಿಸಿಕೊಳ್ಳಿ. ಇಲ್ಲದೇ ಹೋದರೆ ಬಳಿಕ ತಹಶೀಲ್ದಾರ್ ಕಾನೂನಿ ಅನ್ವಯ ಏನು ಮಾಡಬೇಕು ಅದನ್ನು ಮಾಡುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ವಿಎ ಶರಣ್ಯ, ರೈತ ಸಂಘದ ಮುಖಂಡ ರೂಪೇಶ್ ರೈ ಅಲಿಮಾರು ಗ್ರಾ. ಪಂ ಸದಸ್ಯರುಗಳಾದ ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು ಸ್ಥಳೀಯ ನಿವಾಸಿಗಳಾದ ಪದ್ಮಪ್ಪ ಪೂಜಾರಿ, ಪದ್ಮನಾಭ ಆಚಾರ್ಯ, ಶೀನಪ್ಪ ಪೂಜಾರಿ,ಶಾಶ್ವತ್ ಸಾಲಿಯಾನ್ ಹಾಗೂ ವೀರಪ್ಪ ಪೂಜಾರಿ ಡೆಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.
ಕೋಡಿಂಬಾಡಿ ವಲಯ ಕಾಂಗ್ರೇಸ್ ನೇತೃತ್ವದಲ್ಲಿ ಕೋಡಿಂಬಾಡಿ ಪಂಚಾಯತ್ ಅವರಣದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲೂ ಈ ರಸ್ತೆ ಬೇಡಿಕೆಯು ಸೇರಿತ್ತು. ಪ್ರತಿಭಟನೆಯ ಬಳಿಕ ಸಲ್ಲಿಸಿದ ಮನವಿಯಲ್ಲಿ ಪರನೀರು ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡುವಂತೆ ಕೋರಲಾಗಿತ್ತು. ಅದರ ಮುಂದಿನ ಬೆಳವಣಿಗೆಯಾಗಿ ಈ ರಸ್ತೆ ಪರಿಶೀಲನೆ ನಡೆದಿದೆ.




























