ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು, ಭಾರತೀಯ ತಾಂತ್ರಿಕ ಶಿಕ್ಷಣ ಸಂಘ ನವದೆಹಲಿ, ವಿವೇಕಾನಂದ ಸಂಶೋಧನಾ ಕೇಂದ್ರ ಪುತ್ತೂರು ಮತ್ತು ಐಇಇಇ ವಿಸಿಇಟಿ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ-2022 ಜೂ.17 ರಂದು ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆಯಲಿದೆ.
ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅವರ ಪ್ರಾಜೆಕ್ಟ್ ಸಂಬಂಧಿಸಿದಂತೆ ಪ್ರಬಂಧಗಳನ್ನು ಮಂಡಿಸುವುದರ ಮೂಲಕ ತಮ್ಮಲ್ಲಿರುವ ಹೊಸ ಹೊಸ ಆವಿಷ್ಕಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದುದಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನಾ ವಿಭಾಗದಲ್ಲಿ ಹೆಚ್ಚು ಆಸಕ್ತಿಯನ್ನು ಮೂಡಿಸುವುದರ ಜತೆಯಲ್ಲಿ ಅವರನ್ನು ಉತ್ತಮ ತಂತ್ರಜ್ಞರನ್ನಾಗಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದೆ.
ರಾಷ್ಟ್ರದ್ಯಂತ ವಿವಿಧ ಕಾಲೇಜುಗಳ ಇಂಜಿನಿಯರಿಂಗ್ ಹಾಗೂ ಎಂಬಿಎ ವಿಭಾಗದ ಸುಮಾರು 400 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ವಿಭಾಗಗಳಲ್ಲಿ ಒಟ್ಟು 60 ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಅಲ್ಲದೆ ಪ್ರಾಜೆಕ್ಟ್ ಗಳಿಗೆ ಸಂಬಂಧಗಳಿಗೆ 50ಕ್ಕೂ ಮಿಕ್ಕಿ ಪೋಸ್ಟರ್‌ಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಇಲ್ಲಿ ಮಂಡಿಸಲ್ಪಡುವ ಎಲ್ಲಾ ಪ್ರೌಢ ಪ್ರಬಂಧಗಳನ್ನು ಮುದ್ರಿಸಿ ಸಂಚಿಕೆಯ ರೂಪದಲ್ಲಿ ಪ್ರಕಟಿಸಿ ಬಿಡುಗಡೆಗೊಳಿಸಲಾಗುವುದು. ಆ ದಿನ ಬೆಳಿಗ್ಗೆ 9.30ಕ್ಕೆ ನಡೆಯುವ ಉಧ್ಘಾಟನಾ ಸಮಾರಂಭದಲ್ಲಿ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಪ್ರೊ.ಚಂದ್ರಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ .ರವಿಕೃಷ್ಣ.ಡಿ.ಕಲ್ಲಾಜೆ ಮುಖ್ಯ ಭಾಷಣ ಮಾಡಲಿದ್ದಾರೆ. ಇನ್ನೋರ್ವ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಅದೇ ದಿನ ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್‌ಪ್ರಸನ್ನ. ಕೆ, ಸಂಚಾಲಕ ಸುಬ್ರಹ್ಮಣ್ಯ ಭಟ್.ಟಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದಲ್ಲದೆ ಅದೇ ದಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ತಯಾರಿಸಿದ ಪ್ರಾಜೆಕ್ಟ್ಗಳ ಪ್ರದರ್ಶನ ಆವಿಷ್ಕಾರ್ 2022 ಏರ್ಪಡಿಸಲಾಗಿದೆ. ಬೆಳಿಗ್ಗೆ 9.30 ರಿಂದ ಸಂಜೆ 3 ಗಂಟೆಯವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ನಿರ್ಮಿಸಿದ ವಿವಿಧ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಅವಕಾಶವಿದ್ದು, ಇದನ್ನು ವೀಕ್ಷಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರೋತ್ಸಾಹಿಸಬೇಕು ಅಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ವಿವಿಧ ಸವಲತ್ತುಗಳ ಪರಿಚಯವನ್ನೂ ಮಾಡಿಕೊಳ್ಳಬೇಕೆಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























