ಬಂಟ್ವಾಳ: ಸರಕಾರಿ ವೈದ್ಯರೋರ್ವರ ನಕಲಿ ಸಹಿ ಹಾಗೂ ಸೀಲ್ ಬಳಸಿ ಸರಕಾರಕ್ಕೆ ವಂಚಿಸಲು ಪ್ರಯತ್ನಿಸಿ ಆರೋಪಿಯೋರ್ವ ಸಿಕ್ಕಿ ಬಿದ್ದ ಪ್ರಕರಣ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಲ ಶಾಲಾ ರಸ್ತೆ ನಿವಾಸಿ ಶೇಖ್ ಫಿರೋಜ್ ಆದಂ(26)ಬಂಧಿತ ಆರೋಪಿ.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವೇದಾವತಿ ಅವರ ದೂರಿನ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಫಿರೋಜ್ ಆದಂ ವಿಟ್ಲ ಪೋಲಿಸ್ ಠಾಣೆಯ ಮುಂಭಾಗದ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಮಾಲಕ ಅಬ್ದುಲ್ ಖಾದರ್ ಅವರ ಮಗನಾಗಿದ್ದು, ಆತ ಗ್ರಾಹಕನೋರ್ವನ ಫಿಟ್ ನೆಸ್ ಗಾಗಿ ವೈದ್ಯರ ನಕಲಿ ಸಹಿ ಬಳಸಿದ್ದಾನೆ ಎಂಬ ಆರೋಪದಲ್ಲಿ ಪೋಲೀಸರು ಬಂಧಿಸಿದ್ದಾರೆ.
ಇಸುಬು ಎಂಬ ವ್ಯಕ್ತಿ ಲೈಸನ್ಸ್ ಮರುನವೀಕರಣ ಮಾಡಲು ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಗೆ ಅರ್ಜಿ ಸಲ್ಲಿಸಿದರು. ಆದರೆ ಲೈಸೆನ್ಸ್ ಮರುನವೀಕರಣಕ್ಕೆ ವೈದ್ಯರ ಪಿಟ್ ನೆಸ್ ಸರ್ಟಿಫಿಕೇಟ್ ಪಡೆಯಬೇಕು ಎಂಬುದು ಇಲಾಖೆಯ ನಿಯಮ. ಆದರೆ ಈ ಡ್ರೈವಿಂಗ್ ಸ್ಕೂಲ್ ನ ಮಾಲಕನ ಮಗ ವೈದ್ಯರ ಸಹಿ ಹಾಗೂ ಸೀಲ್ ನಕಲಿ ಮಾಡಿ ಲೈಸೆನ್ಸ್ ನವೀಕರಣ ಮಾಡಲು ಮೆಲ್ಕಾರ್ ಆರ್.ಟಿ.ಒ.ಕಚೇರಿಗೆ ಕಳುಹಿಸಿಕೊಟ್ಟಿದ್ದ. ಅಲ್ಲಿ ವಿಟ್ಲ ಸರಕಾರಿ ವೈದ್ಯರ ಒರಿಜಿನಲ್ ಸಹಿ ಹಾಗೂ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ಸ್ ನವರು ಕಳಹಿಸಿದ ಪಿಟ್ ನೆಸ್ ಅರ್ಜಿ ಯಲ್ಲಿರುವ ವೈದ್ಯರ ಸಹಿ ತಾಳೆ ಮಾಡಿದಾಗ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಆರ್.ಟಿ.ಒ.ಇನ್ಸ್ ಪೆಕ್ಟರ್ ವಿಟ್ಲ ವೈದ್ಯರಿಗೆ ಪರಿಶೀಲನೆ ಗಾಗಿ ಕಳುಹಿಸಿಕೊಡುತ್ತಾರೆ.
ಈ ವೇಳೆ ಆರೋಗ್ಯ ಅಧಿಕಾರಿ ಅದನ್ನು ಪರಿಶೀಲಿಸಿದಾಗ ನಕಲಿ ಸಹಿ ಹಾಕಿದ ಬಗ್ಗೆ ಗಮನಕ್ಕೆ ಬಂದು ಇದರ ತನಿಖೆಗಾಗಿ ವಿಟ್ಲ ಪೋಲಿಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಚರಣೆ ನಡೆಸಿದ ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಆರಂಭದಲ್ಲಿ ಲೈಸೆನ್ಸ್ ನವೀಕರಣ ಮಾಡಲು ಅರ್ಜಿ ನೀಡಿದ ಇಸುಬು ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ನಲ್ಲಿ ಅರ್ಜಿ ನೀಡಿದ ಬಗ್ಗೆ ಮಾಹಿತಿ ನೀಡುತ್ತಾನೆ. ಈತನ ಮಾಹಿತಿ ಮೇಲೆ ಫಿರೋಜ್ ಆದಂ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಸತ್ಯ ಸಂಗತಿ ಬಯಲಾಗಿದೆ. ಈ ಆರೋಪದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.

























