ಮಂಗಳೂರು: ಕನ್ನಡ ಸೇನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ವತಿಯಿಂದ ಜೂ.19 ರಂದು ಬೆಳ್ತಂಗಡಿ ತಾಲೂಕು ಪುಂಜಾಲಕಟ್ಟೆ ಬಸವನಗುಡಿ ‘ವಿಶ್ವಕರ್ಮ ಸಭಾಂಗಣ’ ದಲ್ಲಿ ಬಡ ಕುಟುಂಬಕ್ಕೆ ಕಿಟ್ ವಿತರಣೆ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಬಡ ವಿದ್ಯಾರ್ಥಿಗಳಿಗೆ ಕನ್ನಡ ಸೇನೆ ಕರ್ನಾಟಕ ದಕ್ಷಿಣ ಕನ್ನಡ ವತಿಯಿಂದ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಚಂದ್ರಶೇಖರ ಎ., ಕನ್ನಡ ಸೇನೆ ಕರ್ನಾಟಕ ಹೋರಾಟದ ಹಾದಿಯಲ್ಲಿ ಬಂದು ಸಮಾಜಮುಖಿ ಕಾರ್ಯಕ್ರಮದೊಂದಿಗೆ ಮುಂದಿನ ದಿನಗಳಲ್ಲಿ ಕನ್ನಡಾಂಬೆಯ ಒಳಿತಿಗೆ ತನ್ನನ್ನು ತೊಡಗಿಸುವುದರೊಂದಿಗೆ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ತನ್ನ ಸೇವೆಯನ್ನು ಸಲ್ಲಿಸಲು ಕಟಿಬದ್ದವಾಗಿದೆ ಎಂದರು.

ಪುಂಜಾಲಕಟ್ಟೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಭವಿಷ್ಯ, ಚರಣ್ಯ ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಮಾಲಾಡಿ ಗ್ರಾಮದಲ್ಲಿ ಅಪಘಾತಕ್ಕೆ ಒಳಗಾದ ಸಂಜೀವ ರವರಿಗೆ ಯಾವುದೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಅವರ ಮಕ್ಕಳಿಗೆ ಕಿಟ್ ವಿತರಣೆ, ವಸ್ತ್ರದಾನ, ಆರ್ಥಿಕ ಸಹಾಯವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯರಾದ ಯು. ಅಬ್ಬಾಸ್ ಇಬ್ರಾಹಿಂ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನಕೇಶವ, ದಕ್ಷಿಣ ಕನ್ನಡ ಕಾರ್ಯದರ್ಶಿಗಳಾದ ಪ್ರವೀಣ್ ಶೆಟ್ಟಿ, ದಕ್ಷಿಣ ಕನ್ನಡ ಕಾರ್ಯಧ್ಯಕ್ಷರಾದ ಗುರುಚಂದ್ರ ಹೆಗ್ಡೆ, ಗೌರವ ಸಲಹೆಗಾರರಾದ ವೃಷಭ ಆರಿಗ, ಸುರತ್ಕಲ್ ತಾಲೂಕು ಅಧ್ಯಕ್ಷರಾದ ಸಂಜೀವ ಸುವರ್ಣ, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಗುರುಪ್ರಸಾದ್ ಕಾರ್ಯಕ್ರಮಕ್ಕೆ ಶುಭ ಸಂದೇಶ ನೀಡಿದರು. ಕಾರ್ಯದರ್ಶಿ ಕೃಷ್ಣರವರು ಸದಸ್ಯರ ಮಾಹಿತಿಯನ್ನು ನೀಡಿ, ಉಪಾಧ್ಯಕ್ಷರಾದ ಆದಂ ರವರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.
























