ಮಂಗಳೂರು: ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಅನೇಕ ನಗರಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇಂದು ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದೆ.
ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದ್ದು, ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಬಗ್ಗೆ ಕಟ್ಟೆಚ್ಚರ ಮಾಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ನಗರದ ರಾಷ್ಟ್ರೀಯ ಹೆದ್ದಾರಿ 73ನೇ ಪಡೀಲು ಹೈವೇ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಓವರ್ ಬ್ರಿಡ್ಜ್ ಒಳಗಡೆ ಕೂಡಾ ಸಂಪೂರ್ಣವಾಗಿ ನೀರು ನಿಂತಿದ್ದು ವಾಹನಗಳು ಸಂಪೂರ್ಣವಾಗಿ ಮುಳುಗಿ ಹೋಗಿದೆ.
ಇನ್ನು ಸುಳ್ಯ ಪುತ್ತೂರು ಕಡೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯಯವಾಗಿದೆ. ಅಷ್ಟೇ ಅಲ್ಲದೆ ಗಾಳಿ ಮಳೆಯ ಪರಿಣಾಮ ಮರಗಳು ರಸ್ತೆ ಅಡ್ಡಕ್ಕೆ ಧರಾಶಾಹಿಯಾಗಿ ಉರುಳಿ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಧಾರಾಕಾರ ಮಳೆ ಪರಿಣಾಮ ಭೂಕುಸಿತ ಸಂಭವಿಸಿದ್ದರಿಂದ ರೈಲು ಸಂಚಾರಕ್ಕೆ ತೊಂದರೆಯಾಗುವುದರಿಂದ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ರೈಲು ಸಂಚಾರ ನಿರ್ಬಂಧ ಮಾಡಲಾಗಿದೆ. ಮಂಗಳೂರು -ಪಡೀಲ್ ಹಾಗೂ ಸುಬ್ರಹ್ಮಣ್ಯ-ಮಂಗಳೂರು ಕಡೆಗೆ ಸಂಚರಿಸುವ ರೈಲು ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇನ್ನು ಮರವೂರು ಸೇತುವೆ ಬಳಿ ಕೂಡಾ ರಸ್ತೆ ಬಿರುಕುಬಿಟ್ಟಿದೆ.
ಮಡಿಕೇರಿ ತಾಲೂಕಿನ ಜೋಡುಪಾಲ, ಮದೆನಾಡು, ಸಂಪಾಜೆ ಸೇರಿದಂತೆ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದ್ದು, ವರುಣನ ಅಬ್ಬರಕ್ಕೆ ಜನರು ಪರದಾಡುವಂತ್ತಾಗಿದೆ.



























