ಮಾಣಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡುವ ಜವಾಬ್ದಾರಿ ದೇಶದ ನಾಗರಿಕರಾದ ನಮಗೆಲ್ಲರಿಗೂ ಇದೆ. ಮತ್ತು ಮಕ್ಕಳಾದ ತಾವು ಈ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಇದೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.

ಪಂಚಾಯತ್ ಸಭಾಂಗಣದಲ್ಲಿ ಜರುಗಿದ 2022-23ನೇ ಸಾಲಿನ ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆಸಬಹುದಾದ ಕೆಲಸ ಕಾರ್ಯಗಳ ಬಗ್ಗೆ ಮತ್ತು ಸ್ವಚ್ಛತೆಯ ಬಗ್ಗೆ ಮಕ್ಕಳು ಗಮನ ಹರಿಸಿ ತಮ್ಮ ಮನೆ ಮತ್ತು ಪರಿಸರದ ಜನರಿಗೆ ತಿಳಿ ಹೇಳಿದಾಗ ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ರವರು ಮಾತನಾಡಿ, ಮಕ್ಕಳ ಗ್ರಾಮ ಸಭೆಯನ್ನು ನಡೆಸುವ ಅಗತ್ಯ ಮತ್ತು ಮಕ್ಕಳ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಶಾಲೆಗಳಿಗೆ ಬೇಕಾದ ಆವಶ್ಯಕತೆಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಿದರು. ಅವುಗಳಿಗೆ ಸರಿಯಾಗಿ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪ್ರತಿಕ್ರಿಯಿಸಿದರು.

ಈ ವೇಳೆ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೆರಾ, ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ, ರಮಣಿ ಡಿ. ಪೂಜಾರಿ, ಸೀತಾ ಆರೋಗ್ಯ ಸಹಾಯಕಿ ಭಾರತಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು. ಪಿಡಿಓ ಗಿರಿಜಾ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.




























