ವಿಟ್ಲ: ಭ್ರಷ್ಟಾಚಾರ ಮುಕ್ತವಾದ ವ್ಯವಸ್ಥೆಯನ್ನು ಎಲ್ಲಾ ಇಲಾಖೆಯಲ್ಲಿ ನೀಡಬೇಕು. ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಮೂಲಭೂತ ಸೌಕರ್ಯಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳಬೇಕು. ಮಳೆಗಾಲದಲ್ಲಿ ಎಲ್ಲಾ ಸಮಯದಲ್ಲಿ ದೂರವಾಣಿಗೆ ಸ್ಪಂದನೆ ಮಾಡಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ವಿಟ್ಲದಲ್ಲಿ ಅಕ್ರಮ ಸಕ್ರಮ ಸಮಿತಿಯ ಸಭೆಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ಪ್ರಕೃತಿ ವಿಕೋಪದಲ್ಲಿ ನೀಡುವ ಪರಿಹಾರ ಅನುಕಂಪ ಆಧಾರದಲ್ಲಿ ಗೌರವಿತವಾದ ಮೊತ್ತವನ್ನು ಹೊಂದಿರಬೇಕು ಮತ್ತು ತಕ್ಷಣ ನೀಡುವ ಕಾರ್ಯ ಮಾಡಬೇಕು. ಜನರಿಂದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
ವಿಟ್ಲ ಹೋಬಳಿಯ ಹನ್ನೊಂದು ಗ್ರಾಮಗಳ ವ್ಯಾಪ್ತಿಯ ಅಕ್ರಮ ಸಕ್ರಮ ಮೂಲಕ 21 ಅರ್ಜಿಯಲ್ಲಿ 15ಮಂಜೂರಾಗಿದ್ದು, 6 ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಿಕೊಡಲಾಗಿದೆ. 94ಸಿ ಹಾಗೂ 94ಸಿಸಿ ಯೋಜನೆಯ ಮೂಲಕ 33 ಹಕ್ಕು ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್, ಬಂಟ್ವಾಳ ತಹಶೀಲ್ದಾರ ಸ್ಮಿತಾ ರಾಮ್, ವಿವಿಧ ಗ್ರಾಮ ಪಂಚಾಯಿತಿಗಳ ಸುಧೀರ್ ಕುಮಾರ್ ಶೆಟ್ಟಿ, ರಾಮಕೃಷ್ಣ ಮೂಡಂಬೈಲು, ಉಮೇಶ್, ಜಯಪ್ರಕಾಶ್ ನಾಯಕ್, ಯಶಸ್ವಿನಿ ಶಾಸ್ತ್ರೀ, ರಾಜೇಶ್ ಕರವೀರ, ಅಶೋಕ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ಯಾದವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




























