ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ವಾತಾವರಣ ಬದಲಾಗುತ್ತಿದೆ. ಇಷ್ಟು ದಿನಗಳ ಕಾಲ ಸೈನಿಕರಷ್ಟೇ ಉಗ್ರರನ್ನು ಬಂಧಿಸುವಲ್ಲಿ ನಿರತರಾಗುತ್ತಿದ್ದರು. ಇದೀಗ ಗ್ರಾಮಸ್ಥರು ಸೈನಿಕರಿಗೆ ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊದಲೆಲ್ಲಾ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಬದುಕಲು ಹೆದರುವಂತ ಪರಿಸ್ಥಿತಿ ಇತ್ತು. ಇದೀಗ ಅದಕ್ಕೆಲ್ಲಾ ವ್ಯತಿರಿಕ್ತ ಎನ್ನುವಂತೆ ರಿಯಾಸಿ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟದ ರೂವಾರಿ ಲಷ್ಕರ್ ಕಮಾಂಡರ್ ತಾಲಿಬ್ ಹುಸೇನ್‍ನನ್ನು ಗ್ರಾಮಸ್ಥರೇ ಸದೆಬಡೆದು ನಂತರ ಟುಕ್ಸಾನ್‍ನಲ್ಲಿ ಭದ್ರತಾ ಪಡೆಗಳಿಗೆ ಒಪ್ಪಿಸಿದೆ. ಈತನ ಜೊತೆಗೆ ಮತ್ತೊಬ್ಬ ಉಗ್ರ ಫೈಝುಲ್ ಅಹಮದ್ ದಾರ್‌ನನ್ನು ಗ್ರಾಮಸ್ಥರು ಬಂಧಿಸಿದ್ದಾರೆ.
ಎಲ್‍ಇಟಿಯ ಇಬ್ಬರು ಭಯೋತ್ಪಾದಕರು ರಿಯಾಸಿ ಜಿಲ್ಲೆಯ ಟುಕ್ಸಾನ್‍ದಲ್ಲಿ ಅಡಗಿದ್ದರು. ಇದನ್ನು ಗಮನಿಸಿದ ಅಲ್ಲಿನ ಗ್ರಾಮಸ್ಥರು ಶಸ್ತ್ರಾಸ್ತ್ರಗಳೊಂದಿಗೆ ಈ ಇಬ್ಬರು ಉಗ್ರರನ್ನು ಹೆಡೆಮುರಿ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರ ಜೊತೆಗೆ ಉಗ್ರರ ಬಳಿ ಇದ್ದ 2 ಎಕೆ -47 ರೈಫಲ್‍ಗಳು, 7 ಗ್ರೆನೇಡ್‍ಗಳು ಹಾಗೂ ಪಿಸ್ತೂಲ್‍ನ್ನು ವಶಪಡಿಸಿಕೊಳ್ಳಲಾಗಿದೆ.
ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅವರು, ಗ್ರಾಮಸ್ಥರ ಧೈರ್ಯ, ಸಾಹಸವನ್ನು ಶ್ಲಾಘಿಸಿ, 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.