ಬಂಟ್ವಾಳ: ಕೆಲವು ದಿನಗಳಿಂದ ನಿರಂತರವಾಗಿ ಎಡೆಬಿಡದೆ ಸುರಿಯುವ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದಲೂ ನೀರಿನ ಹರಿವು ಹೆಚ್ಚಾಗುತ್ತಲೆ ಇದ್ದು, ಇಂದು ಬೆಳಿಗ್ಗೆ 8 ಮಿ.ಮಿ.ಎತ್ತರದಲ್ಲಿ ಅತ್ಯಂತ ವೇಗವಾಗಿ ಹರಿಯುತ್ತಿದೆ.
ನೀರಿನ ಅಪಾಯದ ಮಟ್ಟ 8.5 ಆಗಿದ್ದು, ಈಗಾಗಲೇ 8 ಮಿ.ಮಿ. ಎತ್ತರದಲ್ಲಿ ನೀರು ಹರಿಯುತ್ತಿದ್ದು, ನೆರೆ ಬರುವ ಬಹುತೇಕ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ನದಿ ತೀರದ ಜನರ ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.

ತಗ್ಗು ಪ್ರದೇಶ ಜಲಾವೃತ:
ನೀರು ಹೆಚ್ಚಾದಂತೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಾಣೆಮಂಗಳೂರು ಹಳೆ ಪೇಟೆಯಲ್ಲಿರುವ ಮಿಲಿಟರಿ ಗ್ರೌಂಡ್ ಗೆ ನೀರು ತುಂಬಿದೆ, ಪಾಣೆಮಂಗಳೂರು ಸೇತುವೆಯ ಅಡಿ ಭಾಗದ ಕಂಚಿಕಾರ ಪೇಟೆಯ ರಸ್ತೆಗೂ ನೀರು ಬಂದಿದೆ ಆದರೆ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ.

























