ಕಾಣಿಯೂರು: ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಬಳಿಯಿರುವ ಸೇತುವೆಯಿಂದ ಕಾರೊಂದು ಬಿದ್ದು ಯುವಕರಿಬ್ಬರು ನಾಪತ್ತೆಯಾಗಿದ್ದು, ಈ ಪ್ರಕರಣ ರಾಜ್ಯಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಜು.10 ರಂದು ಮಧ್ಯಾಹ್ನ ವೇಳೆಗೆ ಹೊಳೆ ನೀರಿನಲ್ಲಿ ಕಾರು ಪತ್ತೆಯಾಗಿದ್ದು, ಪೂರ್ತಿ ದಿನ ನೀರಿನಲ್ಲಿ ಹುಡುಕಾಟ ನಡೆಸಿದರೂ ಯುವಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಿನ್ನೆ (ಜು.10) ಬಕ್ರೀದ್ ಹಬ್ಬವಿದ್ದರೂ ಮುಸ್ಲಿಂ ಈಜುಗಾರರ ತಂಡ ಮತ್ತು ಸ್ಥಳೀಯ ಮುಸ್ಲಿಂ ಯುವಕರು ನೀರು ಪಾಲಾದ ಯುವಕರಿಗಾಗಿ ದಿನವಿಡೀ ಹುಡುಕಾಟ ನಡೆಸುವ ಮೂಲಕ ತಮ್ಮ ವೃತ್ತಿ ಧರ್ಮವನ್ನು ಪಾಲಿಸಿದ್ದಾರೆ.
ಹೌದು.., ತಮ್ಮ ಹಬ್ಬದ ದಿನವಾದರೂ ವಿಷಯ ತಿಳಿದ ತಕ್ಷಣ ಆಗಮಿಸಿದ ತಂಡ ಸಂಜೆಯವರೆಗೂ ಶೋಧ ಕಾರ್ಯ ನಡೆಸಿದ್ದಾರೆ. ಹಬ್ಬವನ್ನು ಆಚರಿಸದೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸ್ಥಳೀಯ ಮುಸ್ಲಿಂ ಯುವಕರ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಈ ಮೂಲಕ ಹಬ್ಬದ ಸಂಭ್ರಮಕ್ಕಿಂತ ಸಮಾಜವೇ ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಬಜರಂಗದಳ ಬೆಳಂದೂರು ವಲಯ ಸಂಚಾಲಕರು ಮತ್ತು ಅವರ ತಂಡವೂ ಕೂಡ ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟಿಗೆ ಇದ್ದು, ದಿನವಿಡೀ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ಜು.9 ರಂದು ರಾತ್ರಿ ಕಾಣಿಯೂರು ಬೈತಡ್ಕದಲ್ಲಿ ನಡೆದಿದ್ದು, ನೀರುಪಾಲಾಗಿರುವ ಕಾರು ಪತ್ತೆಯಾಗಿದ್ದು, ನಿನ್ನೆ ಬೆಳಿಗ್ಗಿನಿಂದ ಸಂಜೆಯವರೆಗೂ ಹುಡುಕಾಡಿದರೂ ಪ್ರಯಾಣಿಕರ ಬಗ್ಗೆ ಪತ್ತೆಯಾಗಿಲ್ಲ. ಕತ್ತಲಾದ ಹಿನ್ನೆಲೆ ಎಸ್.ಡಿ.ಆರ್.ಎಫ್ ತಂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇಂದು ಮುಂಜಾನೆಯಿಂದ ಪುನಃ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.


























