ಬಂಟ್ವಾಳ : ಸಂಬಂಧಿಕ ಮಹಿಳೆಯೊರ್ವಳು ಮೆಸೇಜ್ ಮಾಡಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೋರ್ವ ಮನೆಗೆ ನುಗ್ಗಿ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಪಿಲಿಮೊಗರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪಿಲಿಮೊಗರು ನಿವಾಸಿ ಉಮೇಶ್ ಎಂಬವರ ಪತ್ನಿ ಲತಾ ರನ್ನು ಕೊಲ್ಲಲು ಪ್ರಯತ್ನಿಸಿದ್ದು, ಗಾಯಗೊಂಡಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಲ್ಲಿಪಾಡಿ ನಿವಾಸಿ ರಮೇಶ್ ಎಂಬಾತ ಆರೋಪಿಯಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.

ರಮೇಶ್ ಲತಾ ಅವರ ಸಂಬಂಧಿಕನಾಗಿದ್ದು, ಮನೆಗೆ ಬಂದು ಹೋಗುತ್ತಿದ್ದ. ಮನೆಯವರ ಜೊತೆ ಸಲುಗೆಯಿಂದ ಇದ್ದು, ಆತ ಕಾಲ್ ಹಾಗೂ ಮೆಸೇಜ್ ಮಾಡುತ್ತಿದ್ದ, ಈ ವಿಚಾರ ಗಂಡ ಉಮೇಶ್ ಅವರಿಗೂ ತಿಳಿದು ಪತ್ನಿ ಗೆ ಬೈದು ಮೆಸೇಜ್ ಹಾಗೂ ಕಾಲ್ ಮಾಡದಂತೆ ತಿಳಿಸಿದ್ದರು.
ಈ ವಿಚಾರದಲ್ಲಿ ರಮೇಶ್ ಲತಾ ಅವರ ಮನೆಗೆ ಬಂದಿದ್ದು, ಯಾಕೆ ಮೆಸೇಜ್ ಮತ್ತು ಕಾಲ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾನೆ. ಲತಾ ಅವರು ಕಾರಣವನ್ನು ತಿಳಿಸಿದಾಗ ಆರೋಪಿ ರಮೇಶ್ ಅವಾಚ್ಯ ಶಬ್ದಗಳಿಂದ ಬೈದು ಮೈಮುಟ್ಟಲು ಬಂದಿದ್ದು, ವಿರೋಧ ವ್ಯಕ್ತಪಡಿಸಿ ಗಂಡನಲ್ಲಿ ತಿಳಿಸುವುದಾಗಿ ಹೇಳಿದಾಗ ಮನೆಯ ಒಳಗೆ ಇದ್ದ ಕತ್ತಿಯನ್ನು ತಂದು ತಲೆಗೆ ಕಡಿದಿದ್ದಾನೆ.
ಲತಾ ಅವರ ಬೊಬ್ಬೆ ಕೇಳಿ ಪಕ್ಕದ ಮನೆಯಲ್ಲಿರುವ ಮೈದುನ ಪ್ರಕಾಶ್ ಹಾಗೂ ಅತ್ತೆ ಕುಸುಮ ಅವರು ಮನೆಗೆ ಬಂದಾಗ ಅವರನ್ನು ನೋಡಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮಾಂತರ ಪೋಲೀಸರು ಆರೋಪಿಗಾಗಿ ಪತ್ತೆಗಾಗಿ ಬಲೆ ಬೀಸಿದ್ದಾರೆ.


























