ಕಾರ್ಕಳ: ಮಧ್ಯರಾತ್ರಿ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು ಮಾಲೀಕನ ಮುಖಕ್ಕೆ ಮೆಣಸಿನ ಪುಡಿ ಎರಚಿ, ಮುಖಕ್ಕೆ ಪಂಚೆ ಬಿಗಿದು ಪರಾರಿಯಾದ ಘಟನೆ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ದೇವಿಕೃಪಾ ಜಯಪುರ ಎಂಬಲ್ಲಿ ಜು.18 ರ ಮಧ್ಯರಾತ್ರಿ ನಡೆದಿದೆ.
ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ದೇವಿಕೃಪಾ ಜಯಪುರ ಎಂಬಲ್ಲಿ ಜು.18 ರಂದು ಕೃಷ್ಣಭಟ್ ಎಂಬುವವರ ಮನೆಯ ನಾಯಿ ಮಧ್ಯರಾತ್ರಿ ಬೊಗಳಿದ್ದು, ಇದರಿಂದ ಎಚ್ಚೆತ್ತ ಯಜಮಾನ ಮನೆ ಬಾಗಿಲು ತೆಗೆದು ಹೊರಬಂದಾಗ ಇಬ್ಬರು ಅಪರಿಚಿತರು ಕೃಷ್ಣಭಟ್ ಮುಖಕ್ಕೆ ಮೆಣಸಿನ ಪುಡಿ ಎಸೆದು, ಮತ್ತೊಬ್ಬ ಅವರ ಪಂಚೆಯನ್ನು ಹಿಡಿದೆಳೆದು ಅದನ್ನು ಮುಖ ಮತ್ತು ಕುತ್ತಿಗೆಗೆ ಸುತ್ತಿದ್ದಾನೆ. ಈ ವೇಳೆ ಕೃಷ್ಣಭಟ್ ಬೊಬ್ಬೆ ಹಾಕಿದ್ದನ್ನು ಕಂಡು ಇವರ ಕೈಯಲ್ಲಿದ್ದ ಟಾರ್ಚ್ ಕಸಿದು ಇಬ್ಬರು ಓಡಿಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಪರಿಚಿತರು ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
























