ಬಂಟ್ವಾಳ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ವ್ಯಾಪ್ತಿಯಲ್ಲಿ ಬರುವ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳ ಜೊತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರ ಮುಖಾಮುಖಿ ಕಾರ್ಯಕ್ರಮ ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಸ್ವಚ್ಛತೆ, ಕಸ ವಿಲೇವಾರಿ, ದಾರಿದೀಪ ನಿರ್ವಹಣೆ, ಕುಡಿಯುವ ನೀರು, ವಿದ್ಯುತ್ ನಿರ್ವಹಣೆ ಇತ್ಯಾದಿ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪಂಚಾಯತ್ ಅಧ್ಯಕ್ಷರು ಸಮರ್ಪಕವಾಗಿ ಉತ್ತರಿಸಿದರು.
ಬಳಿಕ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರು, ವಿದ್ಯಾರ್ಥಿಗಳಾದ ತಾವು ತಮ್ಮ ವಿದ್ಯಾಭ್ಯಾಸದ ಜೊತೆಗೆ ಪರಿಸರದ ಕಡೆ ಗಮನಹರಿಸಿ, ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಕೆಲವು ಪ್ರಮುಖ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎಂದು ಹೇಳಿದರು.

ಈ ವೇಳೆ ಗೈಡ್ಸ್ ಶಿಕ್ಷಕಿ ಆಶಾಲತಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿ, ಕಾರ್ಯದರ್ಶಿ ಭಾರತಿ ವಂದಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.




























