ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಬೆಳ್ಳಾರೆಯ ಏಳು ಮಂದಿ ಎಸ್‍ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳವಾರ ರಾತ್ರಿ ಪ್ರವೀಣ್ ಕುಮಾರ್ ನೆಟ್ಟಾರು ದುಷ್ಕರ್ಮಿಗಳ ಕೈಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದರು. ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದ್ದು, ನಿನ್ನೆ ತಡರಾತ್ರಿ ಶಂಕಿತ ಆರೋಪದ ಹಿನ್ನೆಲೆ ಬೆಳ್ಳಾರೆ ಎಸ್‍ಡಿಪಿಐ ಕಾರ್ಯಕರ್ತರ ಮನೆಗೆ ನುಗ್ಗಿ ಏಳು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದ ಬೆನ್ನಲ್ಲೇ ಪೊಲೀಸರು ಅಮಾಯಕರನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಎಸ್‍ಡಿಪಿಐ ಆರೋಪಿಸಿದೆ. ಈವರೆಗೆ ಶಾಂತವಾಗಿದ್ದ ಕರಾವಳಿ ಪ್ರವೀಣ್ ಹತ್ಯೆಯ ಬಳಿಕ ಆಕ್ರೋಶ ಭುಗಿಲೆದ್ದಿದೆ. ಹಿಂದೂ ಕಾರ್ಯಕರ್ತರು ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ.


























