ಮಂಗಳೂರು: ಸುಳ್ಯದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧಿಸಿದಂತೆ ಪೊಲೀಸರು ಶೀಘ್ರ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಹತ್ಯೆಯಾದ ಪ್ರವೀಣ್ ಹಾಗೂ ಕೆಲ ದಿನಗಳ ಹಿಂದೆ ಹತ್ಯೆಯಾದ ಮಸೂದ್ ಈ ಇಬ್ಬರ ಕುಟುಂಬಗಳೂ ರಾಜ್ಯ ಸರ್ಕಾರ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದರು.
ರಾಜಕೀಯ ದ್ವೇಷಕ್ಕಾಗಿ ಯಾವುದೋ ಪಕ್ಷದ ಕಾರ್ಯಕರ್ತರು ಬಲಿಯಾಗಬಾರದು. ರಾಜಕಾರಣಿಗಳ ಮಾತಿಗೆ ಕಿವಿಗೊಟ್ಟು ಸಮಾಜದಲ್ಲಿ ದ್ವೇಷ ಸೃಷ್ಟಿಸಲು ಬಿಡಬಾರದು., ಈಗಾಗಲೇ ಕರಾವಳಿಯಲ್ಲಿ ಕೋಮು ದ್ವೇಷಕ್ಕೆ ಅನೇಕ ಯುವಕರು ಬಲಿಯಾಗಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಅನೇಕರು ಶಾಸಕರು ಸಂಸದರು ಆಗಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ಮನೆಯವರನ್ನು ತಿರುಗಿ ನೋಡಿದ ಉದಾಹರಣೆಗಳಿಲ್ಲ. ಇನ್ನಾದರೂ ಯುವ ಸಮೂಹ ಅರ್ಥಮಾಡಿಕೊಂಡು ರಾಜಕಾರಣಿಗಳು ದ್ವೇಷದ ಮಾತಿಗೆ ಬಲಿಯಾಗದೆ ಸಮಾಜಮುಖಿ ಕೆಲಸ ಮಾಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಶುಭೋದಯ ಆಳ್ವ,ಅನಿಲ್ ಕುಮಾರ್, ಸವಾದ್ ಸುಳ್ಯ, ಶಾಂತಲಾ ಗಟ್ಟಿ, ಚಂದ್ರಕಲಾ, ಅಪ್ಪಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



























