ಮಂಗಳೂರು: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದಲ್ಲಿ ಇದುವರೆಗೂ ಪೊಲೀಸರು 15ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಶಂಕಿತರ ಪೈಕಿ ಇಬ್ಬರನ್ನು ಬಂಧನ ಮಾಡಲಾಗಿದೆ.

ಝಾಕೀರ್ ಸವಣೂರು (29), ಶಫೀಕ್ ಬೆಳ್ಳಾರೆ (27) ಬಂಧಿತರು ಎಂದು ತಿಳಿದು ಬಂದಿದೆ.
ಝಾಕೀರ್ ಸವಣೂರಿನಲ್ಲಿ ಫಾಸ್ಟ್ ಫುಡ್ ಅಂಗಡಿ ವ್ಯವಹಾರ ನಡೆಸುತ್ತಿದ್ದು, ಎಸ್ ಡಿ ಪಿ ಐ ಸರ್ವೇ ಘಟಕದ ಅಧ್ಯಕ್ಷನಾಗಿದ್ದಾನೆ ಎನ್ನಲಾಗಿದೆ. ಝಾಕೀರ್ ವಿರುದ್ಧ ಈಗಾಗಲೇ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ದೊರೆತ ಸಾಕ್ಷಿ ಆಧಾರಗಳನ್ನು ಪರಿಗಣಿಸಿ ಇಬ್ಬರನ್ನು ಬಂಧಿಸಿದ್ದೇವೆ ಎಂದು ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ್ ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಗೆ ಯಾವ ಸಂಘಟನೆಯ ಸಂಪರ್ಕವಿತ್ತು ಎಂಬ ಬಗ್ಗೆ ತನಿಖೆ ಮುಂದುವರಿಸುತ್ತೇವೆ ಎಂದು ಬೆಳ್ಳಾರೆಯಲ್ಲಿ ಎಸ್ಪಿ ಮಾಹಿತಿ ನೀಡಿದ್ದಾರೆ.

























