ಮಂಗಳೂರು: ಸುರತ್ಕಲ್‌ನಲ್ಲಿ ಗುರುವಾರ ರಾತ್ರಿ ಹತ್ಯೆ ನಡೆದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಪಣಂಬೂರು, ಮುಲ್ಕಿ, ಬಜಪೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ.
ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯವನ್ನು ಸಂಪರ್ಕಿಸುವ ಗಡಿಯಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಲಾಗುತ್ತದೆ. ಗುರುವಾರ ರಾತ್ರಿ 10 ಗಂಟೆಯಿಂದ ಅನಾವಶ್ಯಕವಾಗಿ ರಸ್ತೆಗೆ ಇಳಿದರೆ ವ್ಯಕ್ತಿಗಳನ್ನು ಬಂಧಿಸಲಾಗುತ್ತದೆ. ವಾಹನವನ್ನು ಜಪ್ತಿ ಮಾಡಲಾಗುವುದು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಜನರು ಈ ಆದೇಶವನ್ನು ಪಾಲಿಸಬೇಕು ಎಂದು ಶಶಿಕುಮಾರ್ ಮನವಿ ಮಾಡಿದ್ದಾರೆ.


























