ಸದ್ಯ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಬಿದ್ದ ಕೊಳ್ಳಿ
ಮತ್ತು ಹತ್ಯಾ ಸರಣಿಯಿಂದ ಯುಪಿ ಆಡಳಿತದ ಮಾಡೆಲ್ ರಿಂಗಣಿಸುತ್ತಿದೆ. ರಾಜ್ಯ ಕೇಸರಿ ಪಡೆಯಲ್ಲಿ ಎಲ್ಲೆಲ್ಲೂ ಯೋಗಿ ಜಪ ಶುರುವಾಗಿದೆ. ಸಿಎಂ ಅವರಿಂದ ಹಿಡಿದು ಕಾರ್ಯಕರ್ತನವರೆಗೂ ಬುಲ್ಡೋಜರ್ ಬಾಬಾ ಮಹಿಮೆಯ ಮಂತ್ರ ಪಠಣವಾಗಿದೆ. ಕರಾವಳಿ ಪ್ರದೇಶ ಪ್ರಕ್ಷುಬ್ಧತೆಗೆ ತಿರುಗಿದ್ದರಿಂದ ಬಿಜೆಪಿ ನಾಯಕರಿಗೆ ಆದಿತ್ಯನಾಥ್ ಕ್ರಮಗಳು, ಯುಪಿ ಮಾದರಿ ಬೇಡಿಕೆ ಹಬ್ಬಲು ಕಾರಣಕೊಡ್ತಿದೆ.
ಕರ್ನಾಟಕದಲ್ಲಿ ಯೋಗಿ ಮಾದರಿ ಪ್ರಯೋಗದ ಯಜ್ಞ..!!
ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಪ್ರಚಂಡ
ಬಹುಮತದಿಂದ ಕೇಸರಿ ಪತಾಕೆಯನ್ನ ಹಾರಿಸಿದ ಕೇಸರಿ
ಕಲಿ. ಉತ್ತರ ಪ್ರದೇಶದಲ್ಲಿ ಯೋಗಿ ನಡೆದಿದ್ದೆ ಹಾದಿ. ಆದ್ರೆ,
ಈ ಹಾದಿ ಆರಂಭದಲ್ಲಿ ಅಷ್ಟು ಸುಲಭದ್ದಾಗಿರಲಿಲ್ಲ. ಸದಾ
ಕೋಮು ದಳ್ಳುರಿಯನ್ನೇ ಉಸಿರಾಡ್ತಿದ್ದ ಇಲ್ಲಿನ ಬೀದಿಗಳಲ್ಲಿ
ಕಲ್ಲು ತೂರಾಟಗಳೇ ಸಾಮ್ರಾಜ್ಯ ಸ್ಥಾಪಿಸಿದ್ದವು. ಆದ್ರೆ, ಯೋಗಿ ಹೆಜ್ಜೆ ಇಟ್ಟ ಬಳಿಕ ಇಡೀ ವ್ಯವಸ್ಥೆಯೇ ಬದಲಾಗಿತ್ತು. ಗಾಠಿ ಹಿಡಿದ ರಟ್ಟೆಗಳಿಗೆ ಬಲಿಷ್ಠ ಶಕ್ತಿ ಬಂದಿತ್ತು. ಚಾಣಾಕ್ಯ ಹಾಕಿಕೊಟ್ಟ ಸಾಮ,ದಾನ ಭೇದ, ದಂಡ ನಾಲ್ಕು ಮಂತ್ರಗಳನ್ನ ಯೋಗಿ ಚಾಚೂ ತಪ್ಪದೇ ಪಾಲಿಸಿದ್ದರು. ಇದರಲ್ಲಿ ದಂಡಕ್ಕೆ ಹೆಚ್ಚಿನ ಆದ್ಯತೆ ನೀಡಿದ ಯೋಗಿ ಸರ್ಕಾರ, ರಾಜ್ಯದಲ್ಲಿನ ಸಂಘರ್ಷಗಳಿಗೆ ತಮ್ಮದೇ ಮಾದರಿಯನ್ನ ದೇಶದಲ್ಲಿ ಪರಿಚಯಿಸಿದ್ದರು. ಸದ್ಯ
ರಾಜ್ಯದಲ್ಲಿ ಘಟಿಸುತ್ತಿರುವ ಘಟನೆಗಳಿಗೆ ಅಂತ್ಯಗಾಣಿಸಲು
ಇದೇ ಮಾದರಿ ಅಳವಡಿಕೆಗೆ ಕೂಗೆದ್ದಿದೆ.
ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯ ಬಳಿಕ ಯೋಗಿ ಮಾದರಿ ಹೆಚ್ಚು ಪ್ರತಿಧ್ವನಿಸುತ್ತಿದೆ. ಪಕ್ಷದ ಕಾರ್ಯಕರ್ತರಷ್ಟೇ ಅಲ್ಲ, ಸಿಎಂ ಬೊಮ್ಮಾಯಿ ಕೂಡ ಈ ಮಾದರಿಯ ಅಗತ್ಯತೆ ಬಗ್ಗೆ ಮಾತನಾಡ್ತಿದ್ದಾರೆ. ಕೋಮು ಸಾಮರಸ್ಯಕ್ಕಾಗಿ ಅಗತ್ಯ ಬಿದ್ದರೆ, ಅಂತಹ ಪ್ರಸಂಗ ಬಂದರೆ ಯೋಗಿ ಮಾದರಿಯನ್ನು ರಾಜ್ಯಕ್ಕೆ ತರಲಾಗುವುದು ಅಂತ ಸಿಎಂ ಬೊಮ್ಮಾಯಿ ಕನವರಿಸಿದ್ದಾರೆ.
ಬೊಮ್ಮಾಯಿ ಸಂಪುಟದ ಸಹದ್ಯೋಗಿ ಅಶ್ವತ್ಥ ನಾರಾಯಣ್, ಯೋಗಿ ಸರ್ಕಾರಕ್ಕಿಂತಲೂ 5 ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳುತ್ತೇವೆ. ಜನರ ತಾಳ್ಮೆಯನ್ನು ಕೆಲ ಪ್ರಚೋದಕರು ಪರೀಕ್ಷೆ ಮಾಡ್ತಿದ್ದಾರೆ. ಇಂತಹ ದುಷ್ಕರ್ಮಿಗಳನ್ನು ಅಗತ್ಯ ಬಿದ್ದರೆ ಎನ್‌ಕೌಂಟರ್ ಮಾಡಲು ಸಿದ್ಧ. ಇಂತವರು ಕನಸಿನಲ್ಲಿಯೂ ಹತ್ಯೆ ಮಾಡಲು ಹಿಂಜರಿಯಬೇಕು ಅಂತ ಎಚ್ಚರಿಸಿದ್ದಾರೆ. ಒಟ್ಟಾರೆ, ಎಸ್.ಎಂ ಕೃಷ್ಣ ಹಾಕಿಕೊಟ್ಟ ಸಿಂಗಪುರ ಮಾದರಿ, ಕುಮಾರಸ್ವಾಮಿ ಹೇಳಿದ ಕಾಂಪಿಟ್ತ್ ಚೀನಾ, ಬಿಎಸ್. ವೈ ಹೇಳಿದ್ದ ಗುಜರಾತ್ ಮಾದರಿಗಳು ಸದ್ಯ ಪಕ್ಕಕ್ಕೆ ಸರಿದಿವೆ. ದೇಶದಲ್ಲಿ ಹಬ್ಬುತ್ತಿರುವ ಕೋಮು ಸಾಮರಸ್ಯ ಕದಡುವ ದುಷ್ಕರ್ಮಿಗಳಿಗೆ ಯೋಗಿ ಮಾದರಿ ಸದ್ದು ಮಾಡ್ತಿದೆ…



























