ಮಂಗಳೂರು: ನಗರದ ಮೇರಿಹಿಲ್ ಪರಿಸರದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ.
ಮೇರಿಹಿಲ್ ಪರಿಸರದಲ್ಲಿ ಬುಧವಾರ ಬೆಳಗ್ಗೆ 10.15ರ ವೇಳೆ ಭೂಮಿ ಕಂಪಿಸಿದೆ ಎನ್ನಲಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ವಸತಿ ಸಮುಚ್ಚಯದ ನಿವಾಸಿಗಳು ಹೊರಗೆ ಓಡಿ ಬಂದಿದ್ದಾರೆ.
ಭೂಮಿ ಕಂಪಿಸಿದ ಮೇಲೆ ಶಾಲಾ ವಿದ್ಯಾರ್ಥಿಗಳನ್ನು ಶಿಕ್ಷಕರು ಸುರಕ್ಷತೆ ದೃಷ್ಟಿಯಿಂದ ಹೊರಗೆ ಕಳಿಸಿದ್ದಾರೆ. ಕೆಲ ಸಮಯದ ಬಳಿಕ ಎಂದಿನಂತೆ ಪಠ್ಯ ಚಟುವಟಿಕೆಗಳು ಆರಂಭವಾಗಿದೆ.
ಕೆಲ ದಿನಗಳ ಹಿಂದೆ ಸುಳ್ಯ,ಮಡಿಕೇರಿ ಭಾಗದಲ್ಲಿ ಹಲವು ಬಾರಿ ಭೂಮಿ ಕಂಪಿಸಿತ್ತು. ಇದೀಗ ಮೇರಿಹಿಲ್ ಭಾಗದಲ್ಲೂ ಭೂಮಿ ಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಕೆಲ ಸ್ಥಳೀಯರು ಭೂ ಕಂಪನದ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.