ಪುತ್ತೂರು: ದಕ್ಷಿಣ ಕನ್ನಡ ಸಂಸದರೂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಕೇಂದ್ರ ಗೃಹ ಸಚಿವ ಅಮಿತ್ ಷಾ ರನ್ನು ನವದೆಹಲಿಯಲ್ಲಿ ಆ.3 ರಂದು ಭೇಟಿ ಮಾಡಿದರು.
ಕೆಲ ದಿನಗಳ ಹಿಂದೆ ಬೆಳ್ಳಾರೆಯಲ್ಲಿ ನಡೆದಿರುವ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ
ಪ್ರವೀಣ್ ನೆಟ್ಟಾರು ರವರ ಹತ್ಯೆ ಪ್ರಕರಣದ ತನಿಖೆಯನ್ನು
ಎನ್ಐಎ ವಹಿಸಿಕೊಂಡಿರುವುದಕ್ಕೆ ಕೇಂದ್ರ ಗೃಹ ಸಚಿವರಿಗೆ
ಧನ್ಯವಾದ ಸಮರ್ಪಿಸಿದ ನಳಿನ್ ಕುಮಾರ್ ಕಟೀಲ್, ಈ
ಪ್ರಕರಣದ ತನಿಖೆಯಲ್ಲಿ ವಿಶೇಷ ಕಾಳಜಿ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ವಿನಂತಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ ರವರು, ರಾಜ್ಯದಲ್ಲಿ ಎನ್ಐಎಯನ್ನು ಬಲಗೊಳಿಸುವುದರೊಂದಿಗೆ
ಎನ್ಐಎಗೆ ವಹಿಸಿರುವ ಎಲ್ಲಾ ಪ್ರಕರಣಗಳ ತನಿಖೆಯನ್ನು
ಶೀಘ್ರವಾಗಿ ಕೈಗೊಂಡು ಅಪರಾಧ ಕೃತ್ಯ ಎಸಗುವವರಿಗೆ ಕಠಿಣ
ಸಂದೇಶವನ್ನು ನೀಡಲಾಗುವುದು ಎಂದು ಹೇಳಿದರಲ್ಲದೆ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಎನ್ಐಎ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.