ಕರ್ನಾಟಕದಲ್ಲಿ ಚುನಾವಣಾ ವರ್ಷ ಇದು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮತದಾರರ ಮನಗೆಲ್ಲಲು ಎಲ್ಲಾ ರೀತಿ ಕಸರತ್ತುಗಳನ್ನು ಆರಂಭಿಸಿವೆ. ಆದರೆ ಚುನಾವಣೆ ವರ್ಷದಲ್ಲೇ ಬಿಜೆಪಿಗೆ ಭಾರೀ ಬಿಸಿ ತಟ್ಟಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಬೆನ್ನಲ್ಲೇ ರಾಜ್ಯದಲ್ಲಿ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿರುಪಯುಕ್ತ ಸಿಎಂ, ಕೈಲಾಗದ ಗೃಹ ಸಚಿವ ಎಂದು ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಬಿಜೆಪಿಗೆ ಮುಖಭಂಗವಾಗಿದೆ. ಈ ನಡುವೆ ಕೇಂದ್ರ ಗೃಹಸಚಿವ ಅಮಿತ್ ರಾಜ್ಯಕ್ಕೆ ಆಗಮಿಸಿರೋದು ತೀವ್ರ ಕುತೂಹಲವನ್ನು ಮೂಡಿಸಿದೆ.
ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಹೈಕಮಾಂಡ್ ನಡೆ..
ಹೌದು, ಸಿದ್ದರಾಮೋತ್ಸವದ ಅಂಗವಾಗಿ ರಾಜ್ಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿ, ಚುನಾವಣೆಯ ಕಹಳೆಯನ್ನ ಮೊಳಗಿಸಿದ್ದಾರೆ. ಬಸವತತ್ವದ ಮೂಲಕ ಲಿಂಗಾಯತ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಚಾಣಕ್ಯ ಅಮಿತ್ ಶಾ ಕೂಡ ದಿಡೀರ್ ರಾಜ್ಯಕ್ಕೆ ಆಗಮಿಸಿದ್ದಾರೆ. ದೆಹಲಿಯಿಂದ ಕಟೀಲ್ ಜೊತೆ ತಡರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ರಾಜ್ಯಕ್ಕೆ ಬರುವ ಮುನ್ನ ಕಟೀಲ್ ಜೊತೆ ಶಾ ಚರ್ಚೆ..
ರಾಜ್ಯ ಪ್ರವಾಸಕ್ಕೂ ಮುನ್ನ ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ರನ್ನು ದೆಹಲಿಯಲ್ಲೇ ಭೇಟಿಯಾಗಿ ಕೆಲವೊಂದು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ದೆಹಲಿಯಲ್ಲೇ ಅಮಿತ್ ಶಾ ಮತ್ತು ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿದ್ದಾರೆ. ಉಭಯ ನಾಯಕರು ಸುಮಾರು 2 ಗಂಟೆಗಳ ಕಾಲ, ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿ, ರಾಜಕೀಯ ಲೆಕ್ಕಾಚಾರ ಕರಾವಳಿಯಲ್ಲಿ ಹತ್ಯೆ, ಪಕ್ಷದ ಸದ್ಯದ ಪರಿಸ್ಥಿತಿ, ಸರ್ಕಾರದ ಬಗ್ಗೆ ಮಾಹಿತಿ ಪಡೆಯುವಲ್ಲಿ ವಿಳಂಬ. ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಯಲಹಂಕದ ಮದರ್ ಡೈರಿಗೂ ಭೇಟಿ ನೀಡಲಿದ್ದಾರೆ.
ಡ್ಯಾಮೇಜ್ ಕಂಟ್ರೋಲ್ ಮಾಡ್ತಾರಾ ಅಮಿತ್ ಶಾ..!!??
ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಸರಣಿ ಹತ್ಯೆಗಳು, ಸ್ವಪಕ್ಷದವರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದು, ಕಾನೂನು ಸುವ್ಯವಸ್ಥೆ ಮುಂದಿಟ್ಟುಕೊಂಡು ಪ್ರತಿಪಕ್ಷಗಳ ವಾಗ್ದಾಳಿ ನಡೆಸುತ್ತಿರುವುದು, ಬಿಜೆಪಿಗೆ ಚುನಾವಣೆ ವರ್ಷದಲ್ಲಿ ಕೊಂಚ ಹಿನ್ನಡೆಯಾಗುವಂತೆ ಮಾಡಿದೆ. ಹೀಗಾಗಿ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ, ಇಂದು ಬೆಳಗ್ಗೆ ಖಾಸಗಿ ಹೋಟೆಲ್ನಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕಟೀಲ್ ಹಾಗೂ ಕೆಲವು ಪ್ರಮುಖರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ವೇಳೆ, ಸರ್ಕಾರದ ನಡೆ ಹಾಗೂ ನಾಯಕರ ಕಾರ್ಯಚಟುವಟಿಕೆಗಳ ಬಗ್ಗೆ ಸಮಲೋಚನೆ ನಡೆಸಲಿದ್ದಾರೆ.
ಪ್ರವೀಣ್ ಹತ್ಯೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದ್ದು, ಅದನ್ನು ಕಂಟ್ರೋಲ್ ಮಾಡಲು ಯಾವ ರೀತಿ ಕ್ರಮವಹಿಸಬೇಕು ಅನ್ನೋ ಬಗ್ಗೆಯೂ ಸಲಹೆ ನೀಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಅಮಿತ್ ಶಾ ರವರ ದಿಢೀರ್ ರಾಜ್ಯ ಪ್ರವಾಸ ಒಂದು ಕಡೆ ಕುತೂಹಲ ಮೂಡಿಸಿದ್ರೆ, ಮತ್ತೊಂದೆಡೆ ಬಿಜೆಪಿಯಲ್ಲಿ ಸಂಚಲನ ಮೂಡಿಸಿರೋದಂತು ಸುಳ್ಳಲ್ಲ.