ಪುತ್ತೂರು: ಬೊಳುವಾರು ವಸತಿ ಸಮುಚ್ಚಯವೊಂದರ ಮಹಡಿಯಿಂದ ಬಿದ್ದು ಮೃತಪಟ್ಟ ಸುದಾನ ವಸತಿಯುತ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಶಾನ್ ರೈ ಅವರ ಅಂತ್ಯಕ್ರಿಯೆ ಪುತ್ತೂರು ಮಡಿವಾಳಕಟ್ಟೆಯಲ್ಲಿ ಆ.6ರ ಸಂಜೆ ನಡೆಯಿತು. ಈ ಮಧ್ಯೆ ಮೃತ ಬಾಲಕನ ತಂದೆ ಮನೋಹರ್ ರೈ ಯವರು ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುದಾನ ವಸತಿಯುತ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ ಆ. 5ರ ಸಂಜೆ ಬೊಳುವಾರು ವಸತಿ ಸಮುಚ್ಚಯವೊಂದರ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದರು.
ಮೃತ ಸುಶಾನ್ ರೈಯವರ ತಂದೆ ಮನೋಹರ್ ರೈಯವರು ನೀಡಿದ ದೂರಿನಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾರಿ ಬದಲಿಸಿದ್ದ ಸುಶಾನ್..!!
ಸುಶಾನ್ ರೈ ಅವರನ್ನು ಬೆಳಗ್ಗೆ ಅವರ ತಂದೆ ಮನೋಹರ್ ರೈ ಅವರು ಶಾಲೆಗೆ ಬಿಟ್ಟು ಬರುತ್ತಿದ್ದು, ಸಂಜೆ ಆತ ಆಟೋ ರಿಕ್ಷಾದಲ್ಲಿ ಬೊಳುವಾರಿಗೆ ಬಂದು ಅಲ್ಲಿಂದ ಹರಿಪ್ರಸಾದ್ ಹೊಟೇಲ್ ಪಕ್ಕದ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಆ.5 ರಂದು ಎಂದಿನಂತೆ ಸಂಜೆ ಆಟೋ ರಿಕ್ಷಾದಲ್ಲಿ ಬಂದ ಸುಶಾನ್ ರೈ, ಬೊಳುವಾರಿನಲ್ಲಿ ಇಳಿದು ಬಳಿಕ ನಿತ್ಯ ಹೋಗುವ ರಸ್ತೆಯನ್ನು ಬದಲಾಯಿಸಿ ಬೊಳುವಾರು ವಸತಿ ಸಮುಚ್ಚಯದ ಬಳಿಯ ರಸ್ತೆಯಿಂದ ಮನೆ ಕಡೆಗೆ ಹೊರಟ್ಟಿದ್ದರು. ಆದರೆ ಮನೆ ಕಡೆ ಹೋಗದೆ ವಸತಿ ಸಮುಚ್ಚಯಕ್ಕೆ ಹೋಗಿದ್ದಾರೆ. ಕೆಲವೇ ಕ್ಷಣದಲ್ಲಿ ಅವರು ಮಹಡಿಯಿಂದ ಬಿದ್ದ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
























