ವಿಟ್ಲ: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಾಗುವ ಅವಮಾನವನ್ನು ತಡೆಗಟ್ಟಲು ಮತ್ತು ಸರಕಾರವೂ ನಿಷೇಧಿಸಿರುವ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವವರ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ವಿಟ್ಲ ಪೊಲೀಸ್ ನಿರೀಕ್ಷಕರಿಗೆ ಮನವಿ ಮಾಡಲಾಯಿತು.

ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆ.15 ಮತ್ತು ಜ.26 ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೇ ಅದೇ ದಿನ, ಕಾಗದದ/ಪ್ಲಾಸ್ಟಿಕ್ ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆಗಳು, ಕಸ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗುವುದಿಲ್ಲ. ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ. ರಾಷ್ಟ್ರಧ್ವಜದ ಈ ಅವಮಾನವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (103/2011) ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದಾಗ, ಪ್ಲಾಸ್ಟಿಕ್ ನಿಂದ ತಯಾರಿಸಿದ ರಾಷ್ಟ್ರಧ್ವಜದ ಅಪಮಾನವನ್ನು ನಿಲ್ಲಿಸುವಂತೆ ನ್ಯಾಯಾಲಯವು ಸರಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಶಿಕ್ಷಣ ಇಲಾಖೆಗಳು ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಿದ್ದವು. ಇದರೊಂದಿಗೆ ಕೇಂದ್ರ ಸರಕಾರವೂ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದೆ. ಅದರ ಪ್ರಕಾರವೂ ‘ಪ್ಲಾಸ್ಟಿಕ್ ರಾಷ್ಟ್ರಧ್ವಜ’ ಮಾರಾಟ ಮಾಡುವುದು ಸಂವಿಧಾನ ಬಾಹಿರವಾಗಿದೆ. ಈ ಹಿನ್ನೆಲೆ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೃಷ್ಣ ಕುಮಾರ್ ಶರ್ಮ, ಕಾರ್ತಿಕ್ ಪ್ರಸಾದ್ ಆಚಾರ್ಯ, ಗಂಗಾಧರ ಪೂಜಾರಿ, ಚೇತನ್ ಕುಮಾರ್ ಕೆ., ರಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.
